ಮಂಗಳೂರು: ಮೈಸೂರಿನಲ್ಲಿ ಸಮಾವೇಶದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿಯವರನ್ನು ಬಿಜೆಪಿ ನಾಯಕರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಬಳಿಕ ಅಲ್ಲಿಂದ ಕಾರಿನ ಮೂಲಕ ನಗರಕ್ಕೆ ಆಗಮಿಸಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಧಾನಿಯವರು ರೋಡ್ ಶೋ (Moo Road Show In Mangaluru) ನಡೆಸುತ್ತಿದ್ದಾರೆ. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಆರಂಭವಾಗಲಿರುವ ರೋಡ್ ಶೋ ನವಭಾರತ ವೃತ್ತದವರೆಗೆ ನಡೆಯಲಿದೆ. ನಾರಾಯಣಗುರು ವೃತ್ತದ ಬಳಿ ಅರ್ಚಕರು ಮಂತ್ರ ಘೋಷವನ್ನು ಮೊಳಗಿಸುತ್ತಿದ್ದಾರೆ. ಜೊತೆಗೆ ವೃತ್ತದ ಬಳಿ ಚೆಂಡೆ ಕೊಂಬು ವಾದನ, ಶಂಖ ನಾದಗಳು ಮೇಳೈಸುತ್ತಿವೆ. ಇದನ್ನೂ ಓದಿ: ಮೋದಿ ಇರೋವರೆಗೆ ಹಿಂದೂ ಧರ್ಮ, ಸನಾತನ ಧರ್ಮದ ನಾಶ ಅಸಾಧ್ಯ: ಪ್ರಧಾನಿ
ವಿವಿಧ ಭಾಗಗಳಿಂದ ರೋಡ್ ಶೋಗೆ ಮೋದಿ ಅಭಿಮಾನಿಗಳು ಬಂದಿದ್ದಾರೆ. ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಜನಸಾಗರವೇ ನೆರೆದಿದೆ. ಎರಡು ಕಿಲೋಮೀಟರ್ ರಸ್ತೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ. ಅಲ್ಲದೇ ಮಹಾನಗರ ಪಾಲಿಕೆ ಜಂಕ್ಷನ್ ಭರ್ತಿಯಾಗಿದೆ. ಎರಡು ಕಿಲೋಮೀಟರ್ ರಸ್ತೆಯ ಎರಡು ಬದಿಯಲ್ಲಿಯೂ ಜನಸಾಗರವೇ ನೆರೆದಿದೆ. ಅಭಿಮಾನಿಗಳು ಮೋದಿಗೆ ಜೈಕಾರ ಹಾಕುತ್ತಿದ್ದಾರೆ. ಮೋದಿ ಮುಖವಾಡ, ಧ್ವಜ, ಕೇಸರಿ ಟೋಪಿ ಧರಿಸಿಕೊಂಡು ಘೋಷಣೆ ಕೂಗುತ್ತಿದ್ದಾರೆ.