ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ಚುನಾವಣೆ- ಯಾರೆಲ್ಲಾ ಅಖಾಡದಲ್ಲಿದ್ದಾರೆ? 

Public TV
2 Min Read
ELECTION 2
ಬೆಂಗಳೂರು: ಅಂತಿಮ ಹಂತದ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕ ಸಜ್ಜಾಗಿದ್ದು, ಇಂದು ಉತ್ತರ ಕರ್ನಾಟಕದ (UttarKarnataka) 14 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
21 ಮಹಿಳೆಯರು ಸೇರಿ 227 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಕೇಂದ್ರ ಸಚಿವರು, ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರ ಅಳಿಯ, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಓರ್ವ ಮಂತ್ರಿಯ ಪತ್ನಿ, ಹಾಲಿ ಸಂಸದರ ಪತ್ನಿಯೊಬ್ಬರು ಕಣದಲ್ಲಿದ್ದು ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿದ್ದಾರೆ.
ELECTION 1
14 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಪೈಕಿ 10 ಮಂದಿ ರಾಜಕೀಯ ಕುಟುಂಬದಿಂದ ಬಂದವರೇ ಆಗಿದ್ದಾರೆ. ಇವರಲ್ಲಿ ಇಬ್ಬರಿಗೆ ಮಾತ್ರ ಈ ಹಿಂದೆ ಚುನಾವಣೆ ಎದುರಿಸಿದ ಅನುಭವ ಇದೆ. ಕಾಂಗ್ರೆಸ್ ಪಕ್ಷ 8 ವಾರಸ್ದಾರರನ್ನು, ಬಿಜೆಪಿ ಇಬ್ಬರನ್ನು ಕಣಕ್ಕೆ ಇಳಿಸಿದೆ. ದಾವಣಗೆರೆಯಲ್ಲಿ ಅತ್ಯಧಿಕ 30 ಅಭ್ಯರ್ಥಿಗಳಿದ್ರೆ, ರಾಯಚೂರಲ್ಲಿ ಕನಿಷ್ಠ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡೂ ಪಕ್ಷಗಳಿಗೆ 2 ಬಂಡಾಯಗಾರರ ಕಾಟವಿದೆ. ಅಂದ ಹಾಗೇ, ಕಳೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
ELECTION
ಕದನ ಕಲಿಗಳು
* ಕಲಬುರಗಿ: ರಾಧಾಕೃಷ್ಣ (ಕಾಂಗ್ರೆಸ್) V/s ಉಮೇಶ್ ಜಾಧವ್ (ಬಿಜೆಪಿ)
* ಶಿವಮೊಗ್ಗ: ರಾಘವೇಂದ್ರ(ಬಿಜೆಪಿ) V/s ಗೀತಾ ಶಿವರಾಜ್‍ಕುಮಾರ್(ಕಾಂಗ್ರೆಸ್) V/s ಈಶ್ವರಪ್ಪ (ಬಿಜೆಪಿ ಬಂಡಾಯ)
* ಬೆಳಗಾವಿ: ಜಗದೀಶ್ ಶೆಟ್ಟರ್(ಬಿಜೆಪಿ) V/s ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)
* ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ) V/s ಆನಂದ್ ಗಡ್ಡದೇವರಮಠ (ಕಾಂಗ್ರೆಸ್)
* ಧಾರವಾಡ: ಪ್ರಲ್ಹಾದ್ ಜೋಶಿ (ಬಿಜೆಪಿ) V/s ವಿನೋದ್ ಅಸೂಟಿ (ಕಾಂಗ್ರೆಸ್)
* ಬೀದರ್: ಭಗವಂತ್ ಖೂಬಾ(ಬಿಜೆಪಿ) V/sಸಾಗರ್ ಖಂಡ್ರೆ (ಕಾಂಗ್ರೆಸ್)
* ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್(ಬಿಜೆಪಿ) V/s ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್) V/s ವಿನಯ್(ಕಾಂಗ್ರೆಸ್ ಬಂಡಾಯ)
* ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)
* ಬಾಗಲಕೋಟೆ: ಪಿಸಿ ಗದ್ದೀಗೌಡರ್(ಬಿಜೆಪಿ) V/s ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)
* ಬಳ್ಳಾರಿ: ಶ್ರೀರಾಮುಲು (ಕಾಂಗ್ರೆಸ್) V/s ಇ.ತುಕಾರಾಂ (ಕಾಂಗ್ರೆಸ್)
* ಕೊಪ್ಪಳ: ಬಸವರಾಜ್ ಕ್ಯಾವಟೋರ್ (ಬಿಜೆಪಿ) V/s ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್)
* ವಿಜಯಪುರ: ರಮೇಶ್ ಜಿಗಜಿಣಗಿ(ಬಿಜೆಪಿ) V/s ರಾಜು ಆಲಗೂರ (ಕಾಂಗ್ರೆಸ್)
* ರಾಯಚೂರು: ರಾಜಾ ಅಮರೇಶ್ವರ ನಾಯಕ್ (ಬಿಜೆಪಿ) V/s ಕುಮಾರನಾಯಕ್ (ಕಾಂಗ್ರೆಸ್)
* ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) V/s ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್)
ರಾಜ್ಯದ 14 ಕ್ಷೇತ್ರಗಳಲ್ಲಿ ಸುಗಮ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ನಡೆದಿದೆ. ಇಲ್ಲಿ 2.69 ಕೋಟಿ ಮತದಾರರಿಗಾಗಿ 28,269 ಮತಗಟ್ಟೆಗಳನ್ನು ತೆರೆದಿದೆ. 1.45 ಲಕ್ಷ ಮತಗಟ್ಟೆ ಅಧಿಕಾರಿಗಳು, 35ಸಾವಿರ ಪೊಲೀಸರು, ಅರೆಸೇನಾಪಡೆಯ 65 ತುಕಡಿಗಳನ್ನು ನಿಯೋಜಿಸಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಲಿದ್ದು, ಸಂಜೆ ಆರಕ್ಕೆ ಅಂತ್ಯವಾಗಲಿದೆ.
ELECTION 4
ಪ್ರಜಾಪ್ರಭುತ್ವದ ಹಬ್ಬವನ್ನು ಕಣ್ತುಂಬಿಕೊಳ್ಳಲು ನೇಪಾಳ, ಇಂಡೋನೇಷ್ಯಾ ಸೇರಿ ಏಳು ದೇಶಗಳ ಗಣ್ಯರು ಬೆಳಗಾವಿಗೆ ಆಗಮಿಸಿದ್ದಾರೆ. ಆದರೆ ಉತ್ತಮ ಮತದಾನಕ್ಕೆ ರಣಬಿಸಿಲು ವಿಲನ್ ಆಗುವ ಸಂಭವ ಹೆಚ್ಚಿದೆ. ಇಂದು ಕಲ್ಯಾಣ ಕರ್ನಾಟಕದಲ್ಲಿ ಉಷ್ಣಾಂಶ 41ರಿಂದ 44 ಡಿಗ್ರಿ, ಉತ್ತರ ಕನ್ನಡ, ಶಿವಮೊಗ್ಗ ಭಾಗದಲ್ಲಿ ಬಿಸಿಲು 33ರಿಂದ 36 ಡಿಗ್ರಿ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ. ಹೀಗಾಗಿಯೇ ಚುನಾವಣಾ ಸಿಬ್ಬಂದಿಗೆ ಓಆರ್‌ಎಸ್ ಪಾಕೆಟ್‍ಗಳನ್ನು ವಿತರಿಸಲಾಗಿದೆ.

Share This Article