2024ರ ಲೋಕಸಭಾ ಚುನಾವಣೆಗೆ (Loksabha Elections 2024) ಈಗಾಗಲೇ ಕೆಲವು ಕಡೆಗಳಲ್ಲಿ ಮತದಾನ ಆರಂಭವಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಧುಮುಕಿದ್ದಾರೆ. ಆಯಾ ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತಬೇಟೆಗೆ ಇಳಿದಿದ್ದಾರೆ. 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.
ಭಾರತದಲ್ಲಿ ಸರ್ಕಾರ ರಚಿಸಲು ಪಕ್ಷ ಅಥವಾ ಒಕ್ಕೂಟವು 272 ಸ್ಥಾನಗಳ ಸರಳ ಬಹುಮತವನ್ನು ಪಡೆದುಕೊಳ್ಳಬೇಕು. 2019ರ ಹಿಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ (BJP) ಪಕ್ಷವು 303 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಪ್ರಮುಖ ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 52 ಸ್ಥಾನಗಳನ್ನು ಗಳಿಸಿತು. ಆದರೆ ಈ ಬಾರಿಯ ಚುನಾವಣೆಯಲಿ ಯಾವ ಪಕ್ಷಕ್ಕೆ ವಿಜಯದ ಮಾಲೆ ಬೀಳುತ್ತದೆ ಎಂಬ ಕುತೂಹಲ ಮೂಡಿದೆ.
Advertisement
Advertisement
ಈ ಬಾರಿ ಏಪ್ರಿಲ್ 19 (ಈಗಾಗಲೇ ಮತದಾನ ನಡೆದಿದೆ), ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿದೆ. ಹೀಗಾಗಿ ರಾಷ್ಟ್ರಾದ್ಯಂತ ಮತದಾನ ಕೇಂದ್ರಗಳಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ. 1982ರಲ್ಲಿ ಭಾರತದಲ್ಲಿ ಪರಿಚಯಿಸಲಾದ ಮತ್ತು 2000 ರ ದಶಕದ ಆರಂಭದಿಂದಲೂ ವ್ಯಾಪಕವಾಗಿ ಅಳವಡಿಸಿಕೊಂಡ ತಂತ್ರಜ್ಞಾನವಾದ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಮೂಲಕ ಮತದಾರರು ತಮ್ಮ ಮತ ಹಾಕುತ್ತಾರೆ.
Advertisement
ಲೋಕಸಭಾ ಚುನಾವಣೆಗೆ ಭಾರತ ಸಜ್ಜಾಗುತ್ತಿದ್ದಂತೆ, ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ, ರಾಜನಾಥ್ ಸಿಂಗ್ ಶಿವರಾಜ್ ಸಿಂಗ್ ಚೌಹಾಣ್, ದಿಗ್ವಿಜಯ ಸಿಂಗ್, ಒಮರ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್, ಚರಂಜಿತ್ ಸಿಂಗ್ ಚನ್ನಿ, ಜಿತನ್ ರಾಮ್ ಮಾಂಝಿ, ಭೂಪೇಶ್ ಬಘೇಲ್, ಮನೋಹರ್ ಲಾಲ್ ಖಟ್ಟರ್ ಮತ್ತು ಬಿಪ್ಲಬ್ ಕುಮಾರ್ ಸೇರಿದಂತೆ ಹಲವು ಮಾಜಿ ಮುಖ್ಯಮಂತ್ರಿಗಳು ದೇಶಾದ್ಯಂತ ಸಂಸದೀಯ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ರೆ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳು ಯಾರು.? ಹಾಗೂ ಅವರು ಯಾವ ಅಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನು ನೋಡೋಣ.
Advertisement
2024 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮಾಜಿ ಸಿಎಂಗಳ ಪಟ್ಟಿ ಇಲ್ಲಿದೆ:
1) ನರೇಂದ್ರ ಮೋದಿ: ಪ್ರಸ್ತುತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಈ ಬಾರಿ ಕೂಡ ಉತ್ತರಪ್ರದೇಶದ ವಾರಣಾಸಿಯಿಂದ ಕಣಕ್ಕಿಳಿದಿದ್ದಾರೆ. ಇವರು 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.
2) ರಾಜನಾಥ್ ಸಿಂಗ್: ರಕ್ಷಿಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಲಕ್ನೋದಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇವರು 2000 ರಿಂದ 2002 ರವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
3) ಜಗದೀಶ್ ಶೆಟ್ಟರ್: ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಬೇಸರಗೊಂಡು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಇದೀಗ ಮತ್ತೆ ಬಿಜೆಪಿಗೆ ಬಂದಿದ್ದು, ಈ ಬಾರಿ ಅವರಿಗೆ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಇವರು 2012 ರಿಂದ 2013 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
4) ಬಸವರಾಜ ಬೊಮ್ಮಾಯಿ: 20204ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಸವರಾಜ್ ಬೊಮ್ಮಾಯಿ ಅವರಿಗೆ ಬಿಜೆಪಿ ಹಾವೇರಿಯಿಂದ ಟಿಕೆಟ್ ನೀಡಿದೆ. ಇವರು 2021 ರಿಂದ 2023 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
5) ಹೆಚ್. ಡಿ ಕುಮಾರಸ್ವಾಮಿ: ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿಯವರು ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಇವರು 2006 ರಿಂದ 2007 ರವರೆಗೆ ಮತ್ತು ಮತ್ತೆ 2018 ರಿಂದ 2019 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
6) ಶಿವರಾಜ್ ಸಿಂಗ್ ಚೌಹಾಣ್: ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಶಿವರಾಜ್ ಸಿಂಗ್ ಚೌಹಾನ್ ಅವರು ಈ ಬಾರಿ ಕಣಕ್ಕಿಳಿದಿದ್ದಾರೆ. ಇವರು 2005 ರಿಂದ 2018 ರವರೆಗೆ ಮತ್ತು ಮತ್ತೆ 2020 ರಿಂದ 2023 ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
7) ಮನೋಹರ್ ಲಾಲ್ ಖಟ್ಟರ್: ಪ್ರಸ್ತುತ ಹರಿಯಾಣದ ಮುಖ್ಯಮಂತ್ರಿಯಾಗಿರುವ ಮನೋಹರ್ ಲಾಲ್ ಖಟ್ಟರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಹರಿಯಾಣದ ಕರ್ನಾಲ್ ಕ್ಷೇತ್ರದಿಂದ ಅಖಾಡಕ್ಕಳಿದಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಖಟ್ಟರ್, 2014 ರಿಂದ 2024 ರವರೆಗೆ ಹರಿಯಾಣ ಮುಖ್ಯಮಂತ್ರಿಯಾಗಿದ್ದರು.
8) ಅರ್ಜುನ್ ಮುಂಡಾ: ಸದ್ಯ ಕುಂತಿ ಸಂಸದರಾಗಿರುವ ಅರ್ಜುನ್ ಮುಂಡಾ ಅವರು ಈ ಬಾರಿ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿದಿರುವ ಇವರು, 2003 ರಿಂದ 2006 ರವರೆಗೆ ಮತ್ತು ಮತ್ತೆ 2010 ರಿಂದ 2013 ರವರೆಗೆ ಜಾಖರ್ಂಡ್ ಮುಖ್ಯಮಂತ್ರಿಯಾಗಿದ್ದರು.
9) ತ್ರಿವೇಂದ್ರ ಸಿಂಗ್ ರಾವತ್: ಉತ್ತರಾಖಂಡದ ಹರಿದ್ವಾರ ರಾವತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇಲ್ಲಿಏಪ್ರಿಲ್ 19 ರಂದು ಚುನಾವಣೆ ನಡೆದಿದೆ. ರಾವತ್ ಅವರು 2017 ರಿಂದ 2021 ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು.
10) ನಲ್ಲರಿ ಕಿರಣ್ ಕುಮಾರ್ ರೆಡ್ಡಿ: ಆಂಧ್ರಪ್ರದೇಶದ ರಾಜಂಪೇಟೆಯಿಂದ ಬಿಜೆಪಿ ಪಕ್ಷವು ರೆಡ್ಡಿಯವರಿಗೆ ಟಿಕೆಟ್ ನೀಡಿದೆ. ಇವರು 2010 ರಿಂದ 2014 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
11) ಸರ್ಬಾನಂದ ಸೋನೊವಾಲ್: ಅಸ್ಸಾಂನ ದಿಬ್ರುಗಢ ಕ್ಷೇತ್ರದಿಂದ ಸೋನೊವಾಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಇಲ್ಲಿ ಕೂಡ ಏಪ್ರಿಲ್ 19ರಂದು ಚುನಾವಣೆ ನಡೆದಿದೆ. ಇವರು 2016 ರಿಂದ 2021 ರವರೆಗೆ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು.
12) ಬಿಪ್ಲಬ್ ಕುಮಾರ್ ದೇಬ್: ತ್ರಿಪುರದಲ್ಲಿ ತ್ರಿಪುರ ಪಶ್ಚಿಮ ಕ್ಷೇತ್ರದಲ್ಲಿ ದೇಬ್ ಅವರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇವರು 2018 ರಿಂದ 2022 ರವರೆಗೆ ತ್ರಿಪುರಾದ ಮುಖ್ಯಮಂತ್ರಿಯಾಗಿದ್ದರು.
13) ಓ ಪನೀರ್‍ಸೆಲ್ವಂ: ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಪನೀರ್‍ಸೆಲ್ವಂ ಅವರು ಸ್ಪರ್ಧಿಸುತ್ತಿದ್ದಾರೆ. ಇವರು 2001 ರಿಂದ 2002, 2014 ರಿಂದ 2015 ರವರೆಗೆ ಮತ್ತು 2016 ರಿಂದ 2017 ರ ನಡುವೆ ಅಲ್ಪಾವಧಿಗೆ ಒಪಿಎಸ್ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು.
14) ಜಿತನ್ ರಾಮ್ ಮಾಂಝಿ: ಬಿಹಾರದ ಗಯಾ ಕ್ಷೇತ್ರದಿಂದ ಎನ್‍ಡಿಎ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿರುವ ಮಾಂಝಿ 2014 ರಿಂದ 2015 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು.
15) ದಿಗ್ವಿಜಯ ಸಿಂಗ್: ಮಧ್ಯಪ್ರದೇಶದ ರಾಜಗಢ ಕ್ಷೇತ್ರದಿಂದ ದಿಗ್ವಿಜಯ ಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಇವರು 1993 ರಿಂದ 2003 ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
16) ಭೂಪೇಶ್ ಬಘೇಲ್: ಛತ್ತೀಸ್‍ಗಢದ ರಾಜನಂದಗಾಂವ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಬಘೇಲ್ ಅವರು ಸ್ಪರ್ಧಿಸುತ್ತಿದ್ದಾರೆ. ಬಘೇಲ್ ಅವರು 2018 ರಿಂದ 2023 ರವರೆಗೆ ಛತ್ತೀಸ್‍ಗಢ ಮುಖ್ಯಮಂತ್ರಿಯಾಗಿದ್ದರು.
17) ಒಮರ್ ಅಬ್ದುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎಏಓಅ) ಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಇವರು 2009 ರಿಂದ 2015 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.
18) ಮೆಹಬೂಬಾ ಮುಫ್ತಿ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಿಂದ ಜಮ್ಮು ಮತ್ತು ಕಾಶ್ಮಿ?ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಎಏPಆP) ಯಿಂದ ಅಖಾಡಕ್ಕಿಳಿದಿದ್ದಾರೆ. ಇವರು 2016 ರಿಂದ 2018 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.
19) ಚರಂಜಿತ್ ಸಿಂಗ್ ಚನ್ನಿ: ಪಂಜಾಬಿನ ಜಲಂಧರ್ ಕ್ಷೇತ್ರದಿಂದ ಚನ್ನಿ ಅವರನ್ನು ಕಾಂಗ್ರೆಸ್ ಪಕ್ಷ ಸ್ಪರ್ಧೆಗೆ ಇಳಿಸಿದೆ. ಇವರು 2021 ರಿಂದ 2022 ರವರೆಗೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು.
20) ವಿ ವೈತಿಲಿಂಗಂ: ಪುದುಚೇರಿಯಿಂದ ವೈತಿಲಿಂಗಂ ಅವರನ್ನು ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ. ಇವರು 1991 ರಿಂದ 1996 ರವರೆಗೆ ಮತ್ತು 2008 ರಿಂದ 2011 ರವರೆಗೆ ಪುದುಚೇರಿ ಮುಖ್ಯಮಂತ್ರಿಯಾಗಿದ್ದರು.
21) ನಬಮ್ ತುಕಿ: ಅರುಣಾಚಲ ಪ್ರದೇಶದಲ್ಲಿ ಅರುಣಾಚಲ ಪಶ್ಚಿಮದಿಂದ ತುಕಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಇವರು 2011 ರಿಂದ 2016 ರವರೆಗೆ ಎರಡು ಬಾರಿ ಮತ್ತು 2016 ರಲ್ಲಿ ಅಲ್ಪಾವಧಿಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
22) ಗುಲಾಂ ನಬಿ ಆಜಾದ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಿಂದ ಆಜಾದ್ ಅವರು ಡಿಪಿಎಪಿ ಪಕ್ಷದಿಂದ ಅಖಾಡಕ್ಕಿಳಿದಿದ್ದರು. ಆದರೆ ಇದೀಗ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇವರು 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.
ಒಟ್ಟಿನಲ್ಲಿ 22 ಮಂದಿ ಮಾಜಿ ಮುಖ್ಯಮಂತ್ರಿಗಳು ಈ ಬಾರಿಯ ಲೋಕ ಕಣದಲ್ಲಿದ್ದರು. ಸದ್ಯ ಇವರಲ್ಲಿ ಆಜಾದ್ ಅವರು ಚುನಾವನೆಯಿಂದ ಹಿಂದೆ ಸರಿದಿದ್ದಾರೆ. ಉಳಿದ 21 ಮಂದಿ ಇತರ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ಕೊಡಲಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಇಷ್ಟು ಮಂದಿ ಮಾಜಿ ಸಿಎಂಗಳಲ್ಲಿ ಯಾರಿಗೆಲ್ಲ ಜಯ ಸಿಗುತ್ತೆ ಎಂಬುದನ್ನು ನೋಡಲು ಜೂನ್ 4 ರವರೆಗೆ ನೀವು ಕಾಯಲೇಬೇಕಾಗಿದೆ.