– ಅಪ್ಪ ಆಯ್ತು, ಈಗ ಮಗನ ವಿರುದ್ಧ ಗೀತಾ ಸ್ಪರ್ಧೆ
ಶಿವಮೊಗ್ಗ: ಬಂಗಾರಪ್ಪ ಕುಟುಂಬ ವರ್ಸಸ್ ಯಡಿಯೂರಪ್ಪ ಕುಟುಂಬ ಕದನಕ್ಕೆ ಶಿವಮೊಗ್ಗ ಕ್ಷೇತ್ರ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಈ ಮೊದಲು ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ (BY Raghavendra) ಅವರನ್ನು ಎದುರಿಸಲು ಸಜ್ಜಾಗಬೇಕಿದೆ.
ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಅವರಿಗೆ ಇದೇನು ಮೊದಲ ಚುನಾವಣೆಯಲ್ಲ. 2014ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದರು. ಆಗ ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಯಡಿಯೂರಪ್ಪ 6.06 ಲಕ್ಷ ಮತ ಪಡೆದಿದ್ದರು. ಗೀತಾ ಶಿವರಾಜ್ ಕುಮಾರ್ ಅವರು 2.40 ಲಕ್ಷ ಮತಗಳನ್ನು ಪಡೆದಿದ್ದರು. 2024ರಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗುವುದು ಖಚಿತ. ಹಾಗಾಗಿ ಹತ್ತು ವರ್ಷದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಎದುರಿಸಬೇಕಾಗಿದೆ.
Advertisement
Advertisement
ಲೋಕಸಭಾ ಚುನಾವಣೆ (Loksabha Election) ಅಖಾಡದಲ್ಲಿ ಬಂಗಾರಪ್ಪ ಕುಟುಂಬ ಮತ್ತು ಯಡಿಯೂರಪ್ಪ ಕುಟುಂಬದ ಮಧ್ಯೆ ಕಳೆದ 15 ವರ್ಷದಿಂದ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಅವಧಿಯಲ್ಲಿ ನಾಲ್ಕು ಬಾರಿ ಚುನಾವಣೆ ನಡೆದಿದ್ದು, ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರೆ ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!
Advertisement
2009ರಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ (BY Raghavendra) ಮತ್ತು ಕಾಂಗ್ರೆಸ್‌ನಿಂದ ಎಸ್.ಬಂಗಾರಪ್ಪ (S.Bangarappa) ಸ್ಪರ್ಧಿಸಿದ್ದರು. ರಾಘವೇಂದ್ರ 4.82 ಲಕ್ಷ ಮತ ಪಡೆದಿದ್ದರು. ಬಂಗಾರಪ್ಪ 4.29 ಲಕ್ಷ ಮತ ಪಡೆದಿದ್ದರು. 52 ಸಾವಿರ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ಸಾಧಿಸಿ, ಚೊಚ್ಚಲ ಬಾರಿ ಲೋಕಸಭೆ ಪ್ರವೇಶಿಸಿದ್ದರು.
Advertisement
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‌ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದರು. ಯಡಿಯೂರಪ್ಪ ಅವರು 6,06,216 ಮತ ಪಡೆದಿದ್ದರು. ಗೀತಾ ಶಿವರಾಜ್ ಕುಮಾರ್ 2,40,636 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು 2,42,911 ಮತ ಪಡೆದಿದ್ದರು. ಹಾಗಾಗಿ ಗೀತಾ ಶಿವರಾಜ್ ಕುಮಾರ್ ಅವರು ಮೂರನೇ ಸ್ಥಾನ ಪಡೆದಿದ್ದರು.
2018ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವೈ ರಾಘವೇಂದ್ರ, ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ರಾಘವೇಂದ್ರ 5,43,306 ಮತ ಗಳಿಸಿದ್ದರು. ಮಧು ಬಂಗಾರಪ್ಪ 4,91,158 ಮತ ಪಡೆದಿದ್ದರು. 52 ಸಾವಿರ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ರಾಘವೇಂದ್ರ 7,29,872 ಮತ ಗಳಿಸಿದ್ದರು. ಮಧು ಬಂಗಾರಪ್ಪ 5,06,512 ಮತ ಪಡೆದಿದ್ದರು. 2.23 ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದರು.