ಬೆಂಗಳೂರು/ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಜನರು ಬಿಜೆಪಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 20ರ ಗಡಿ ದಾಟಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಪಕ್ಷೇತರ ಅಭ್ಯರ್ಥಿಗಿದೆ ಗೆಲುವಿನ ಅದೃಷ್ಟ!:
ಸಾಕಷ್ಟು ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ಕೆಲವೊಂದು ಸಮೀಕ್ಷೆಗಳು ಸುಮಲತಾ ಗೆಲುವನ್ನ ಸಾರಿ ಹೇಳುತ್ತಿವೆ. ಮತ್ತೆ ಕೆಲವು ನಿಖಿಲ್ ಗೆಲುವಿನ ಸುಳಿವು ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಂಬತ್ತರಲ್ಲಿ ಮತ್ತು ಪಕ್ಷೇತರ ಅಂದರೆ ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಸೀ ವೋಟರ್ ಸರ್ವೆ ಹೇಳಿದೆ.
Advertisement
Advertisement
ಇಂಡಿಯಾ ಟುಡೇ ಆಕ್ಸಿಸ್ ಸರ್ವೆ ಕೂಡ ಮಂಡ್ಯದ ಬಗ್ಗೆ ಕುತೂಹಲಕಾರಿ ಫಲಿತಾಂಶವನ್ನೇ ಕೊಟ್ಟಿದೆ. ಇವರ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21ರಿಂದ 25 ಸೀಟುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ 3ರಿಂದ 6 ಸೀಟುಗಳು ಸಿಗಲಿದ್ದು, ಸ್ವತಂತ್ರ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಹೇಳಿದೆ.
Advertisement
ಟೈಮ್ಸ್ ನೌ ವಿಎಂಆರ್ ಸಮೀಕ್ಷೆಯಲ್ಲಿ ಕೂಡ ಬಿಜೆಪಿಗೆ ಕರ್ನಾಟಕದಲ್ಲಿ 21 ಸ್ಥಾನಗಳ ಸಿಗಲಿವೆಯಂತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬರೀ ಏಳೂ ಸ್ಥಾನಗಳು ದೊರಕಲಿದ್ದು ಇತರ ಪಕ್ಷಗಳಿಗಾಗಲಿ ಪಕ್ಷೇತರರಿಗಾಗ್ಲಿ ಯಾವುದೇ ಸ್ಥಾನಗಳು ಸಿಗಲ್ಲ ಅಂದಿದೆ. ಈ ಸಮೀಕ್ಷೆಯಲ್ಲಿ ಸುಮಲತಾಗೆ ಯಾವುದೇ ಸ್ಥಾನಗಳನ್ನ ಕೊಟ್ಟಿಲ್ಲ. ಆದರೆ ಬಿಜೆಪಿ 20ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗಳಿಸುತ್ತದೆ ಅಂದಿದ್ದು, ಇದೀಗ ಕುತೂಹಲ ಮೂಡಿಸಿದೆ.
Advertisement
ಚಾಣಾಕ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಗೆ 23 ಸೀಟುಗಳು ಬಂದರೆ, 5 ಸೀಟುಗಳು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಸಿಗಲಿವೆ. ಪಕ್ಷೇತರ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ನೋಡಿದರೆ ಮಂಡ್ಯದಲ್ಲಿ ಸುಮಲತಾ ಸೋಲು ಕಾಣುತ್ತಾರೆ ಅನ್ನೋದು ಸಮೀಕ್ಷಾ ವರದಿಯಾಗಿದೆ.
ಎಬಿಪಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳನ್ನ ಬಾಚಿಕೊಂಡ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಯಾಗಲಿದೆ. ಪಕ್ಷೇತರರಿಗೆ ಯಾವುದೇ ಸ್ಥಾನ ಇಲ್ಲ. ಈ ಪ್ರಕಾರ ಹಾಸನ, ಮಂಡ್ಯ, ತುಮಕೂರು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 17 ಸ್ಥಾನಗಳು ಸಿಕ್ರೆ, ಕಾಂಗ್ರೆಸ್‍ಗೆ 8 ಸ್ಥಾನಗಳು ಸಿಗಲಿವೆಯಂತೆ. ಜೆಡಿಎಸ್‍ಗೆ 3 ಸೀಟುಗಳು, ಇತರೆ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಸಿಗಲಿರೋ 3 ಸೀಟುಗಳು ಹಾಸನ, ಮಂಡ್ಯ, ತುಮಕೂರು ಎನ್ನಲಾಗುತ್ತಿದೆ.
ಈ ಎಲ್ಲಾ ಮತಗಟ್ಟೆಯ ಸಮೀಕ್ಷೆಗಳನ್ನ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಪಾಳಯ, ದೋಸ್ತಿಗಳನ್ನ ಸೋಲಿಸುವಂತೆ ಕಾಣಿಸುತ್ತಿದೆ. ಒಟ್ಟಾರೆ ಇದೆಲ್ಲದಕ್ಕೂ ಫೈನಲ್ ಉತ್ತರ ಮೇ 23ಕ್ಕೆ ಸಿಗಲಿದೆ.