– ಬಿಎಸ್‍ವೈಗೆ ಬಿಜೆಪಿ ಕಾರ್ಯಕರ್ತರು ಮನವಿ
– ಕಾರ್ಯಕರ್ತರ ಮಧ್ಯೆಯೇ ಕಿತ್ತಾಟ
ಬೆಂಗಳೂರು: ಬೆಂಗ್ಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹಿಂದೇಟು ಹಾಕಿದ್ದಾರೆ.
ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸ್ಪಷ್ಟನೆ ನೀಡಿರೋ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಾವು ಸುತಾರಾಂ ಸಿದ್ಧವಿಲ್ಲ. ತಮಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇಷ್ಟವಿಲ್ಲ. ಅಲ್ಲದೆ ತಮ್ಮ ಅಸ್ತಿತ್ವ ಏನಿದ್ರೂ ರಾಜ್ಯ ರಾಜಕಾರಣಕ್ಕೆ ಸೀಮಿತ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕ್ಷೇತ್ರದ ಟಿಕೆಟ್ ಕೊಡೋದಾದ್ರೆ ನನ್ನ ಮಗಳಿಗೆ ಕೊಡಿ. ಇಲ್ಲವಾದರೆ ಬೇರೆ ಯಾರಿಗಾದ್ರೂ ಕೊಡಿ ತಮ್ಮ ಅಭ್ಯಂತರ ಇಲ್ಲ. ಆದ್ರೆ ಇತ್ತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾತ್ರ ಯೋಗೇಶ್ವರ್‍ಗೆ ಟಿಕೆಟ್ ನೀಡಿ. ಅವರ ಮಗಳಿಗೆ ಬೇಡ ಎಂದು ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.
ಇತ್ತ ಸಿ.ಪಿ. ಯೋಗೇಶ್ವರ್ ಮತ್ತು ನಿಶಾ ಯೋಗೇಶ್ವರ್ ಗೆ ಟಿಕೆಟ್ ಬೇಡ, ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಗೆ ಟಿಕೆಟ್ ಕೊಡಿ. ಇಲ್ಲವೇ ಕಾರ್ಯಕರ್ತರಿಗೆ ಕೊಡಿ ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಮನೆಯಿಂದ ಹೊರಬಂದ ವೇಳೆ ಕಾರ್ಯಕರ್ತರು ಮನವಿ ಮಾಡಿದ್ದು, ಈ ವೇಳೆ ನಾನೇನು ಮಾಡಲಪ್ಪ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳು ತಿಳಿಸಿವೆ.
ಕಾರ್ಯಕರ್ತರಿಗೆ ಕೊಡಿ, ಕ್ಷೇತ್ರದಲ್ಲಿ ಕಾರ್ಯಕರ್ತರು ಕಷ್ಟಪಡ್ತಿದ್ದಾರೆ ಎಂದು ಕಾರ್ಯಕರ್ತರು ಕೇಳಿಕೊಂಡಾಗ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿ ಯಡಿಯೂರಪ್ಪ ಮನೆಯಿಂದ ತೆರಳಿದ್ದಾರೆ. ಯಡಿಯೂರಪ್ಪ ತೆರಳಿದ ಬಳಿಕ ಧವಳಗಿರಿ ನಿವಾಸದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ತಾವೇ ಕಿತ್ತಾಡಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ಯೋಗೇಶ್ವರ್ ಬೆಂಬಲಿಗರು ಮತ್ತು ರುದ್ರೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.