ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್ ವರ್ಸಸ್ ಸುಮಲತಾ ಅಂಬರೀಶ್ ಮಧ್ಯೆ ಭಾರೀ ಫೈಟ್ ಆರಂಭವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರು ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಲ್ಲೋಲಕಲ್ಲೋವಾಗಿದೆ. ಆದ್ರೂ ಸುಮಲತಾ ಅವರು ಪಕ್ಷ ಟಿಕೆಟ್ ಕೊಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ಪಣ ತೊಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಪ್ರಚಾರಕ್ಕೂ ಇಳಿದಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು `ಗಂಡ ಸತ್ತ ಒಂದೂವರೆ ತಿಂಗಳುಗಳೇ ಕಳೆದಿಲ್ಲ. ಈ ಸ್ಥಿತಿಯಲ್ಲಿ ಅವರಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಈಡಾಗಿದೆ.
ಯಾಕಂದ್ರೆ 2018ರ ನ.24ಕ್ಕೆ ಅಂಬರೀಶ್ ಅವರು ಮರಣ ಹೊಂದಿರುವ ಸುದ್ದಿ ಕೇಳಿದಾಕ್ಷಣ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ದೌಡಾಯಿಸಿದ್ದರು. ಕುಟುಂಬದ ಸದಸ್ಯರನ್ನೇ ಕಳೆದುಕೊಂಡಷ್ಟು ಚಿಂತಾಕ್ರಾಂತರಾಗಿದ್ದರು. ಅಲ್ಲದೆ ಮರುದಿನ ಅಣ್ಣನ ಅಂತ್ಯಸಂಸ್ಕಾರಕ್ಕೆ ತಮ್ಮನಂತೆ ಹೆಗಲು ಕೂಡ ಕೊಟ್ಟಿದ್ದರು. ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ ತರಿಸುವುದರಿಂದ ಹಿಡಿದು ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಿದ್ರು. ಮಂಡ್ಯಕ್ಕೆ ಖುದ್ದು ಭೇಟಿ ಕೊಟ್ಟು ಗಲಾಟೆ ಆಗದಂತೆ ನೋಡಿಕೊಂಡಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹೀಗೆ ಮುಖ್ಯಮಂತ್ರಿ ಅನ್ನೋದನ್ನೂ ಕೂಡ ಮರೆತು ಕುಮಾರಸ್ವಾಮಿಯವರು ಅಂದು ಅಂಬರೀಶ್ ಅಂತ್ಯಸಂಸ್ಕಾರವನ್ನು ತೀರಾ ಮುತುವರ್ಜಿಯಿಂದ ನೆರವೇರಿಸಿದ್ದರು. ಆದ್ರೆ ಇಂದು ಸಿಎಂ ಸಹೋದರನ ಒಂದು ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಏರ್ಪಟ್ಟಿದೆ.
ಈ ಕಡೆ, ತಂದೆಯಂತೆ ಮಗ ನಿಖಿಲ್ ಕೂಡ ಧೈರ್ಯ ತುಂಬಿದ್ದರು. ಅಣ್ಣನಂತೆ ಅಭಿಷೇಕ್‍ಗೆ ಸಾಂತ್ವಾನ ಹೇಳಿದ್ದರು. ಅಂತ್ಯಸಂಸ್ಕಾರ ಆಗುವವರೆಗೂ ಅಭಿಷೇಕ್ ಜೊತೆಯಲ್ಲಿದ್ದರು. ಈಗ ಕಾಲ ಬದಲಾಗಿ ಹೋಗಿದೆ. ಅಧಿಕಾರಕ್ಕಾಗಿ ಫೈಟ್ ಶುರುವಾಗಿದೆ. ಅಂಬಿ ನಿಧನದ ಎರಡೂವರೆ ತಿಂಗಳಲ್ಲಿ ರಾಜಕೀಯ ಬೇಕಿತ್ತಾ ಅನ್ನೋ ಪ್ರಶ್ನೆ ಇದೀಗ ಅಂಬಿ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.
https://www.youtube.com/watch?v=BGvmKX3g6b8
https://www.youtube.com/watch?v=1zAHuxijg6Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv