ಮಂಡ್ಯ: ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬೆನ್ನಲ್ಲೇ ಮಂಡ್ಯ ರಾಜಕೀಯ ವಲಯದಲ್ಲಿ ನಿಖಿಲ್ ಕುಮಾರಸ್ವಾಮಿ ವರ್ಸಸ್ ಅಭಿಷೇಕ್‍ಗೌಡ ಎಂಬ ಚರ್ಚೆ ಶುರುವಾಗಿದೆ.
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸದ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಶನಿವಾರ ನಡೆದ ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಖಾನ್ ಹೊರತುಪಡಿಸಿ ಬೇರೆ ಯಾರೂ ಭಾಗವಹಿಸಿರಲಿಲ್ಲ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಿಲ್ಲೆಯ ಏಳು ಜನ ಶಾಸಕರು ಆಗಮಿಸುತ್ತಾರೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಜೆಡಿಎಸ್ ಮುಖಂಡರೆಲ್ಲ ಗೈರಾಗಿದ್ದು, ರಾಜಕೀಯ ಕಾರಣಕ್ಕೆ ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಈಗಾಗಲೇ ಜಿಲ್ಲೆಯಲ್ಲಿ ಶುರುವಾಗಿದ್ದು, ಇದಕ್ಕೆ ಹಲವು ಜೆಡಿಎಸ್ ಮುಖಂಡರು ದನಿಗೂಡಿಸಿದ್ದಾರೆ. ಈ ನಡುವೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಅಭಿಷೇಕ್ ಅವರಿಗೆ ಟಿಕೆಟ್ ಕೇಳಬಹುದೆಂದು ಜೆಡಿಎಸ್ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಮಂಡ್ಯದಿಂದ ಅಂಬಿ ಪುತ್ರ ಅಭಿಷೇಕ್‍ಗೆ ಟಿಕೆಟ್ ಕೊಡಿ ಎಂದು ಮೊದಲು ದನಿ ಎತ್ತಿದ್ದರು. ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ನಿಖಿಲ್ ಆದರೆ ಕಾಂಗ್ರೆಸ್ಸಿನಿಂದ ಅಂಬರೀಶ್ ಪುತ್ರ ಅಭಿಷೇಕ್ ರನ್ನ ಕಣಕ್ಕಿಳಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಒತ್ತಾಯ ಹೇರುತ್ತಿದ್ದಾರೆ. ಅಷ್ಟೇ ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಗೆ ಅಂಬರೀಶ್ ಪುತ್ರ ಅಭಿಷೇಕ್‍ಗೌಡ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಾವು ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.
ಇತ್ತ ಜೆಡಿಎಸ್‍ನವರೂ ಕೂಡ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮುಂಬರುವ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಅಭಿಷೇಕ್‍ಗೌಡ ಇಬ್ಬರಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಬಿರುಸಿನ ಚರ್ಚೆ ಶುರುವಾಗಿದೆ. ಹೀಗಾಗಿ ಮಂಡ್ಯ ರಾಜಕೀಯದ ಅಖಾಡದಲ್ಲಿ ಕಳೆದೊಂದು ವಾರದಿಂದ ಅಂಬರೀಶ್ ಪುತ್ರ ಅಭಿಷೇಕ್ ಹೆಸರೂ ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv