ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

Public TV
2 Min Read
SUMALATHA AMBAREESH INDAVALU SACHIDANANDA

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಅಖಾಡ ರಂಗೇರಿದೆ. ಅಂದು 2019ರ ಲೋಕಸಭಾ ಚುನಾವಣೆ (Loksabha Election) ವೇಳೆ ಸುಮಲತಾ-ನಿಖಿಲ್ ಕುಮಾರಸ್ವಾಮಿ ಮಧ್ಯೆ ಲೋಕ ಯುದ್ಧ ಜೋರಾಗಿ ನಡೆದಿತ್ತು. ನಿಖಿಲ್ ಪರ ಅವರ ತಂದೆ ಆಗಿನ ಸಿಎಂ ಕುಮಾರಸ್ವಾಮಿ, ಮಂತ್ರಿ ಮಂಡಲದ ಮಂತ್ರಿಗಳು ಸೇರಿದಂತೆ ಹಲವು ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು. ಇನ್ನೊಂದೆಡೆ ಸುಮಲತಾ ಅಂಬರೀಶ್ ಪರವಾಗಿ ಜೋಡೆತ್ತಿನ ರೀತಿ ಅಬ್ಬರದ ಪ್ರಚಾರ ಮಾಡಿದ್ದು ದರ್ಶನ್ (Darshan) ಮತ್ತು ಯಶ್ (Yash). ಸುಮಲತಾ ಅಂಬರೀಶ್ (Sumalatha Ambareesh) ಅವರ ಗೆಲುವಿನ ಹಿಂದೆ ಕೇವಲ ದರ್ಶನ್ ಮತ್ತು ಯಶ್ ಅವರ ಪಾತ್ರದ ಜೊತೆಗೆ ಬ್ಯಾಕ್ ಬೋನ್ ಆಗಿ ಇಂದಿನ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಕೆಲಸ ಮಾಡಿದ್ರು.

Yash Sumalatha Darshan DH 1553600402

ಇಂಡುವಾಳು ಸಚ್ಚಿದಾನಂದ (Indavalu Sacchidananda) ಅವರು ಸುಮಲತಾರನ್ನು ಗೆಲ್ಲಿಸಲು ಎಲ್ಲಾ ನಾಯಕರನ್ನು ಒಗ್ಗೂಡಿಸಿ ಚುನಾವಣೆಯ ರಣ ತಂತ್ರವನ್ನು ಹೆಣೆದಿದ್ದರು. ಸುಮಲತಾ ಅವರ ಗೆಲುವಿಗೆ ಈ ಅಂಶವು ಪ್ರಮುಖ ಕಾರಣವಾಗಿತ್ತು. ಇದಾದ ಬಳಿಕ ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಸಚ್ಚಿದಾನಂದ ಪರ ಸುಮಲತಾ ಅವರು ನಾಮಿನೇಶನ್ ಫೈಲ್ ಹಾಗೂ ಒಂದು ದಿನದ ಪ್ರಚಾರದಲ್ಲಿ ಅಷ್ಟೇ ಕಾಣಿಸಿಕೊಂಡಿದ್ದರು. ಇದು ಸಚ್ಚಿದಾನಂದ ಅವರಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ.  ಇದನ್ನೂ ಓದಿ: ಗಂಗಾವತಿಯಲ್ಲಿ ‘ಗಾಲಿ’ಗೆ ಗಾಳ ಹಾಕಿದ ‘ಕೈ’ ಪಡೆ

ಮೊನ್ನೆ ಬೆಂಗಳೂರಿನ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆದ ಸಭೆಯಗೆ ನಟ ದರ್ಶನ್ ಕೋರಿಕೆ ಮೇರೆಗೆ ಸಚ್ಚಿದಾನಂದ ಹೋಗಿದ್ರು. ಈ ವೇಳೆ ಸುಮಲತಾ ಹಾಗೂ ಸಚ್ಚಿದಾನಂದ ಅವರ ನಡುವೆ ರಾಜಿ ಸಂಧಾನವೂ ಸಹ ಆಗಿದೆ. ಈ ಬಳಿಕ ಸಚ್ಚಿದಾನಂದ ಎಲ್ಲಾ ಮರೆತಿದ್ದಾರೆ ಎನ್ನಲಾಗಿತ್ತು. ನಿನ್ನೆ ಸುಮಲತಾ ಅಂಬರೀಶ್ ಸಚ್ಚಿದಾನಂದ ಅವರ ಶ್ರೀರಂಗಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಲತಾ ಅವರು ಕೆಲ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ನಿನ್ನೆ ಮಂಡ್ಯದಲ್ಲಿ ಇದ್ದ ಸಚ್ಚಿದಾನಂದ ಅಲ್ಲಿ ಕಾಣಿಸಿಕೊಂಡಿಲ್ಲ. ಈ ಮೂಲಕ ಸಚ್ಚಿದಾನಂದ ಸುಮಲತಾ ಅವರ ನಡುವಿನ ಮನಸ್ತಾಪ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ 2019ರ ಚುನಾವಣೆಯಲ್ಲಿ ಸುಮಲತಾ ಅವರ ಬ್ಯಾಕ್ ಬೋನ್ ಆಗಿ ಕೆಲಸ ಮಾಡಿದ್ದ ಸಚ್ಚಿದಾನಂದ ಈಗ ಅಂತರ ಕಾಯ್ದು ಕೊಂಡಿದ್ದಾರೆ. ಇದನ್ನು ಸುಮಲತಾ ಅವರು ಹೇಗೆ ಶಮನ ಮಾಡ್ತಾರೆ ಎನ್ನೋದನ್ನು ಕಾದು ನೋಡಬೇಕಿದೆ.

Share This Article