ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಈ ಬಾರಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ತೀವ್ರ ಕುತೂಹಲ ಹುಟ್ಟಿದೆ. ಈ ಬೆನ್ನಲ್ಲೇ ಇದೀಗ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಚಿವ ರೇವಣ್ಣ ಹಿರಿಯ ಪುತ್ರ ಸೂರಜ್ ರೇವಣ್ಣ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು. ಪ್ರಜ್ವಲ್ ರೇವಣ್ಣ ಬದಲು ಹಾಸನ ಲೋಕಸಭಾ ಕ್ಷೇತ್ರದಿಂದ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಹಾಸನಕ್ಕೆ ಆಗಮಿಸಿದಾಗ ಪ್ರಜ್ವಲ್ ರೇವಣ್ಣ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಸೂರಜ್ ರೇವಣ್ಣ ಅವರು ಮುಂಚೂಣಿಯಲ್ಲಿದ್ದರು. ಪ್ರಜ್ವಲ್ ರೇವಣ್ಣರ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಹಿರಿಯ ಪುತ್ರನನ್ನ ಕಣಕ್ಕಿಳಿಸಲು ಚಿಂತಿಸಿದ್ದಾರೆ. ಹೀಗಾಗಿ ಸೂರಜ್ ಅವರು ಸಚಿವ ರೇವಣ್ಣನವರ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಪ್ರಜ್ವಲ್ ಸ್ಪರ್ಧಿಸಿದರೆ ನಮ್ಮ ಬೆಂಬಲವಿಲ್ಲ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ವಿರೋಧಿಸಿದ್ದರು. ಹೀಗಾಗಿ ಜೆಡಿಎಸ್ ಈಗ ಸೂರಜ್ ರೇವಣ್ಣರನ್ನ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದು, ಈಗಾಗಲೇ ತಂದೆಯ ನೆರಳಿನಲ್ಲಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದ ದಂಡಿಗನಹಳ್ಳಿ ಉಸ್ತುವಾರಿ ವಹಿಸಿಕೊಂಡಿದ್ದ ಸೂರಜ್ ರೇವಣ್ಣ, ಇದೀಗ ಹಾಸನ ಜಿಲ್ಲೆಯ ಉಸ್ತುವಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದರಲ್ಲಿ ಸಚಿವ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರಿಗೆ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸನ ನೀಡಲಾಗಿತ್ತು.
ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ವೇದಿಕೆಗೆ ಆಗಮಿಸಿದ ಸೂರಜ್‍ಗೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಆಸನವನ್ನು ವ್ಯವಸ್ಥೆ ಮಾಡಿಕೊಟ್ಟಿದ್ದರು. ಯಾವುದೇ ಚುನಾಯಿತ ಪ್ರತಿನಿಧಿ ಆಗದೇ ಇದ್ದರೂ ವೇದಿಕೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೂರಜ್ ವೇದಿಕೆಯಲ್ಲಿ ಕುಳಿತಿದ್ದರು. ಒಂದು ಕಡೆ ಪೊಲೀಸ್ ಐಜಿ ಮತ್ತೊಂದೆಡೆ ಎಸ್‍ಪಿ ನಡುವೆ ಸೂರಜ್ ಕುಳಿತುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv