ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗಿದ್ದು, ಎರಡೇ ದಿನದಲ್ಲಿ ನೋವು ವಾಸಿ ಆಗಿದೆ ಎಂದು ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಆಗ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಬೊಮ್ಮಯಿಗೆ ನಮ್ಮನ್ನು ಸಂಪರ್ಕಿಸಿದ್ದರು. ಅವರ ಕರೆಯ ಮೇರೆಗೆ ಆಯುರ್ವೇದ ಪದ್ಧತಿಯಿಂದ ಚಿಕಿತ್ಸೆ ನೀಡಿದ್ದೇವೆ. ಅವರ ಮಂಡಿ ನೋವು ವಾಸಿಮಾಡಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿದ್ದೇವೆ. ನೋವಿಗೆ ಕೆಲವು ದೇಸಿ ಪದ್ಧತಿಯ ತೈಲ ಹಾಗೂ ಆಡಿನ ಹಾಲಿನ ಮಾತ್ರೆಯನ್ನು ನೀಡಿದ್ದು ದಿನಾಲೂ ತೆಗೆದುಕೊಳ್ಳಲು ಸಲಹೆ ನೀಡಿದ್ದೇನೆ ಎಂದರು.
ಆಯುರ್ವೇದ ಚಿಕಿತ್ಸೆಯ ಪರಿಣಾಮವಾಗಿ ಅವರು ನೋವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇದು ಆರು ತಿಂಗಳ ಕೋರ್ಸ್ ಆಗಿದ್ದು, ಮೊದಲನೇ ಹಂತ 40 ದಿನಗಳ ಚಿಕಿತ್ಸೆಯಾಗಿದೆ. ಅದರಲ್ಲಿ 20 ದಿನಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಳಸಿಕೊಳ್ಳುತ್ತೇವೆ. ಕೇವಲ 2 ದಿನಗಳಲ್ಲಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ನೋವು ವಾಸಿ ಆಗಿದ್ದರೂ, ಒಂದು ಕೋರ್ಸ್ ನ್ನು ಮುಗಿಸಬೇಕಾಗುತ್ತದೆ. ಇದರಿಂದಾಗಿ ಮುಖ್ಯಮಂತ್ರಿಗಳು ಇನ್ನೂ 20 ದಿನ ಚಿಕಿತ್ಸೆಯನ್ನು ಪಡೆಯಬೇಕು ಎಂದು ಮಾಹಿತಿ ನೀಡಿದರು.
ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಮಾಜಿ ಉಪ ಮುಖ್ಯಮಂತ್ರಿಗಳಿದ್ದಾಗ ಚರ್ಮ ವ್ಯಾದಿಯಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಕರೆಸಿದ್ದರು. ಅವರಿಗೆ ದೇಸಿ ಪದ್ಧತಿಯ ಚಿಕಿತ್ಸೆ ನೀಡಿ ಚರ್ಮ ರೋಗವನ್ನು ಸಂಪೂರ್ಣ ಗುಣಮುಖ ಮಾಡಲಾಯಿತು. ನಂತರ ಅವರು ಕೊರೊನಾ ಸಂದರ್ಭದಲ್ಲಿ ಸೋಂಕಿತರನ್ನು ಗುಣಮುಖ ಮಾಡುವಂತಹ ಯಾವುದಾದರೂ ಮದ್ದು ಇದೆಯೇ ಎಂದು ಕೇಳಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ
ಅದಕ್ಕೆ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದೆ. ಆ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಆಗ ಸವದಿ ಅವರು ಅಥಣಿ ಮೂಲದ ನಿವಾಸಿಯೊಬ್ಬರನ್ನು ಚಿಕಿತ್ಸೆಗಾಗಿ ಕಳುಹಿಸಿದ್ದರು. ಕೇವಲ ಮೂರು ನಾಲ್ಕು ದಿನಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ಗುಣಮುಖ ಪಡಿಸಿದ್ದೆವು ಎಂದು ಹೇಳಿದರು. ಇದನ್ನೂ ಓದಿ: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ
ಮೇಕೆ ಹಾಲಿನ ಬಗ್ಗೆ ಮಾತನಾಡಿದ ಅವರು, ಮೇಕೆ ಹಾಲಿನ ಬಗ್ಗೆ ಪುರಾತನ ಕಾಲದಿಂದಲೂ ಉಲ್ಲೇಖವಿದೆ. ಇದನ್ನು ಪ್ಯಾರಾಲಿಸಸ್‌ಗೂ ಮುಖ್ಯ ಮದ್ದಾಗಿ ಬಳಸುತ್ತಾರೆ. ಮೇಕೆ ಹಾಲಿನ ಜೊತೆಗೆ ಕೆಲವು ಅಡುಗೆ ಸಾಮಾಗ್ರಿ ಹಾಗೂ ವನಸ್ಪತಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.