ಬೆಂಗಳೂರು: ಬಿಬಿಎಂಪಿ (BBMP) ದಕ್ಷಿಣ ವಲಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಾಲಿಕೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಲೋಕಾಯುಕ್ತ ದಾಳಿ (Lokayuktha Raid) ವೇಳೆ ತಮ್ಮ ಬದಲಿಗೆ ಮಗನನ್ನು ಕಚೇರಿಯಲ್ಲಿ ಕೂರಿಸಿದ್ದ ಎಸ್‌ಡಿಎ ಕವಿತಾ ಹಾಗೂ ಸಹಾಯಕ ಕಂದಾಯ ಅಧಿಕಾರಿ (ARO) ಸುಜಾತಾ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಇದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ. ಅಧಿಕಾರ ಸಹ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.ಇದನ್ನೂ ಓದಿ: ಭೀಕರ ಕಾರು ಅಪಘಾತ – ಯುವ ಪತ್ರಕರ್ತ ದಾರುಣ ಸಾವು
ಕೆಂಪೇಗೌಡ ನಗರದ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿತ್ತು. ಈಗ ಬಗ್ಗೆ ಲೋಕಾಯುಕ್ತ ದೂರಿನ ಅನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಎಸ್‌ಡಿಎ ಕವಿತಾ ಹಾಗೂ ಎಆರ್‌ಓ ಸುಜಾತಾ ಇಬ್ಬರನ್ನು ಬಿಬಿಎಂಪಿ ಅಮಾನತುಗೊಳಿಸಿದೆ.
ಏನಿದು ಪ್ರಕರಣ?
ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದ ವೇಳೆ ಹಲವು ಅಕ್ರಮಗಳು ಬಹಿರಂಗಗೊಂಡಿದ್ದವು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಶುಕ್ರವಾರ (ಜ.10) ಬಿಬಿಎಂಪಿಯ 54 ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸಹಾಯಕ ಕಂದಾಯ ಅಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದಾಗ ತಾಯಿ ಬದಲಾಗಿ ಕಚೇರಿ ಲಾಗಿನ್ ಐಡಿ ಪಡೆದು ಮಗ ಕೆಲಸ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಸಿದ್ಧಾಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದ ನವೀನ್ ಎಂಬಾತನನ್ನ ಬಂಧಿಸಿದ್ದರು.
ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಕವಿತಾ, ತನ್ನ ಬದಲಿಗೆ ಕಚೇರಿ ಲಾಗಿನ್ ಐಡಿಯನ್ನ ಮಗ ನವೀನ್‌ಗೆ ನೀಡಿ ಕೆಲಸಕ್ಕೆ ಕಳಿಸಿದ್ದರು. ದಾಳಿ ನಡೆಸಿದ ವೇಳೆ ವಿಚಾರಿಸಿದಾಗ, ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ತಪ್ಪಿಸಲು ನಾನು ನನ್ನ ತಾಯಿಯ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ನವೀನ್ ಖುದ್ದು ಒಪ್ಪಿಕೊಂಡಿದ್ದನು ಎಂದು ನ್ಯಾ. ಬಿ. ವೀರಪ್ಪ ಅವರು ಹೇಳಿದ್ದರು.
ಅಲ್ಲದೇ ಕವಿತಾ ಅವರು ಸಹಾಯಕರನ್ನಾಗಿ ಗೀತಾ ಎಂಬುವವರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದರು. ಹಾಗಾಗಿ ಅಧಿಕಾರ ದುರುಪಯೋಗ ಆರೋಪದ ಮೇಲೆ ಕಚೇರಿ ಮುಖ್ಯಸ್ಥರಾದ ಸುಜಾತ, ಕೇಸ್ ವರ್ಕರ್ ಕವಿತಾ, ಮಗ ನವೀನ್ ವಿರುದ್ಧ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ: ಸಿದ್ದರಾಮಯ್ಯ ಬಳಿಕ ಡಿಕೆಶಿ ಸಿಎಂ – ಶಾಸಕ ಬಾಲಕೃಷ್ಣ