– ಸುಮಾರು 24 ಮನೆ, 30 ನಿವೇಶನದ ದಾಖಲೆ ಪತ್ತೆ
ಕೊಪ್ಪಳ: ಅಪಾರ್ಟ್‌ಮೆಂಟ್ ಒಳಗೊಂಡು ಸುಮಾರು 24 ಮನೆ, ಕೊಪ್ಪಳದ ಪ್ರತಿಷ್ಠಿತ ವಿವಿಧ ಕಾಲೊನಿಯಲ್ಲಿ 30ಕ್ಕೂ ಹೆಚ್ಚು ನಿವೇಶನ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದ ಜೊತೆಗೆ ನಗದು ಸಿಕ್ಕಿದೆ. ಇದು ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ ಆಗಿದೆ.
ಇಷ್ಟೊಂದು ಪ್ರಮಾಣ ಆಸ್ತಿ ಪತ್ತೆ ಆಗಿದ್ದು, ಕೊಪ್ಪಳದ ಪ್ರಗತಿ ನಗರದಲ್ಲಿನ ಕೆಆರ್ ಐಡಿಎಲ್ ಮಾಜಿ ನೌಕರನ ಮನೆಯಲ್ಲಿ. ಕೆಲಸದಿಂದ ಹೊರ ಬೀಳುವಾಗ ಕೇವಲ 15,000 ರೂ. ವೇತನ ಪಡೆಯುತ್ತಿದ್ದ ಹೊರ ಗುತ್ತಿಗೆ ನೌಕರನ ಮನೆಯಲ್ಲಿನ ಆಸ್ತಿ ಲೆಕ್ಕ ಹಾಕಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಕೊಪ್ಪಳ ಕೆಆರ್‌ಐಡಿಎಲ್ ಇಇ ಕಚೇರಿಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ತನಿಖೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರು ಇಂದು ಹಗರಣದ ಕಿಂಗ್‌ಪಿನ್ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಅವರ ಮನೆ ಮೇಲೆ ದಾಳಿ ಮಾಡಿ, ತನಿಖೆ ಆರಂಭಿಸಿದ್ದಾರೆ.
ತನಿಖೆ ವೇಳೆ ಲೋಕಾಯುಕ್ತರಿಗೆ ಕಳಕಪ್ಪ ನಿಡಗುಂದಿ ಮನೆಯಲ್ಲಿ, ಕೊಪ್ಪಳ, ಭಾಗ್ಯನಗರ ಸೇರಿ ವಿವಿಧ ಕಡೆ 24 ಮನೆ, ಪ್ರತಿಷ್ಠಿತ ಬಡಾವಣೆಯಲ್ಲಿ ಸುಮಾರು 20 ನಿವೇಶನ, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ. ಈ ಎಲ್ಲ ಆಸ್ತಿ ತಮ್ಮ ಸಹೋದರ, ಪತ್ನಿ ಹಾಗೂ ಪತ್ನಿಯ ತಮ್ಮನ ಹೆಸರಿನಲ್ಲಿವೆ. ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ನಿವಾಸಿಯಾಗಿದ್ದ ಕಳಕಪ್ಪ, ಕಳೆದ 20 ವರ್ಷದಿಂದ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ. ಕೆಲ ದಿನಗಳ ಹಿಂದೆ ಸೇವೆಯಿಂದ ವಜಾ ಆಗಿದ್ದಾನೆ. ಆರಂಭದಲ್ಲಿ ತೀರಾ ಕಡಿಮೆ ವೇತನಕ್ಕೆ ಕೆಲಸ ಮಾಡಿರುವ ಕಳಕಪ್ಪ, ವಜಾ ಆಗುವ ವೇಳೆಗೆ ತಿಂಗಳಿಗೆ 15 ಸಾವಿರ ಸಂಬಳ ಪಡೆಯುತ್ತಿದ್ದರು. ಈತನ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಪತ್ರ ಸಿಕ್ಕಿರುವುದು ಲೋಕಾ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಪ್ಪಳದ ಕೆಆರ್‌ಐಡಿಎಲ್‌ನಲ್ಲಿ ಝಡ್.ಎಂ.ಚಿಂಚೊಳ್ಳಿಕರ ಎಂಬವರು ಇಇ ಆಗಿದ್ದಾಗ, ಸುಮಾರು 100 ಕೋಟಿ ರೂ. ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ‘ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿದ ಮೇಲೆ ಅಕ್ರಮ ಸಾಬೀತಾಗಿದೆ. ಈ ಹಿನ್ನೆಲೆ ಇಲಾಖೆ ತನಿಖೆ ನಡೆದು, ಸ್ವತಃ ಕೆಆರ್‌ಐಡಿಎಲ್ ಅಧಿಕಾರಿಗಳು ಆಗಿನ ಇಇ ಝಡ್.ಎಂ.ಚಿಂಚೊಳ್ಳಿಕರ್, ಹೊರ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಹಾಗೂ ಒಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತರು ಭ್ರಷ್ಟಾಚಾರದ ಕಿಂಗ್‌ಪಿನ್ ಕಳಕಪ್ಪ ನಿಡಗುಂದಿ ಮನೆಯಿಂದಲೇ ತನಿಖೆ ಶುರು ಮಾಡಿದ್ದಾರೆ.
ಕೆಆರ್‌ಐಡಿಎಲ್ ಕಚೇರಿಯಲ್ಲಿ ತನಿಖೆ
ಲೋಕಾಯುಕ್ತ ಅಧಿಕಾರಿಗಳು ಒಂದೆಡೆ ಕಳಕಪ್ಪ ನಿಡಗುಂದಿ ಮನೆ ಮೇಲೆ ದಾಳಿ ಮಾಡಿದ್ದರೆ ಮತ್ತೊಂದೆಡೆ ಕೊಪ್ಪಳದ ಕೆಆರ್‌ಐಡಿಎಲ್ ಕಚೇರಿಯಲ್ಲೂ ತನಿಖೆ ಶುರು ಮಾಡಿದ್ದಾರೆ. ಬೆಳಗ್ಗೆಯೇ ಕೆಆರ್‌ಐಡಿಎಲ್ ಕಚೇರಿಗೆ ಆಗಮಿಸಿ ಕಾಯ್ದು ಕುಳಿತಿದ್ದ ಲೋಕಾಯುಕ್ತ ಪೊಲೀಸರು, ಎಇಇ ಆನಂದ ಅವರು ಕಚೇರಿಗೆ ಬಂದ ನಂತರ ಅವರ ಸಹಿ ಪಡೆದು, ತನಿಖೆ ಶುರು ಮಾಡಿದರು. ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಮತ್ತು ಸಿಬ್ಬಂದಿ ತನಿಖೆ ಮಾಡುತ್ತಿದ್ದಾರೆ.
ಜಿಪಂ ಸಿಇಒ ಸಹಿ ನಕಲು
ಸುಮಾರು 72 ಕೋಟಿ ರೂಪಾಯಿ ಸರ್ಕಾರಿ ಹಣ ದುರ್ಬಳಕೆ ಆಗಿರುವ ಪ್ರಕರಣ ಇದಾಗಿದೆ. ಚರಂಡಿ, ಕುಡಿಯುವ ನೀರು, ಶಾಲೆ, ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆಗಿದೆ ಎಂಬ ದೂರು ಕೇಳಿ ಬಂದಿದ್ದವು. ‘ಲೋಕಾ’ ತನಿಖೆ ವೇಳೆ ಸುಮಾರು 96 ಕಾಮಗಾರಿಯಲ್ಲಿ ಸರ್ಕಾರ ಹಣ ದುರುಪಯೋಗ ಆಗಿರುವುದು ಕಂಡುಬಂದಿದೆ. ಇಲಾಖೆಯ ವ್ಯಾಟ್ ಅಕೌಂಟ್‌ನಿಂದ ಸರ್ಕಾರದ ಅನುಮತಿ ಇಲ್ಲದೇ ಹಣ ಡ್ರಾ ಮಾಡಲಾಗಿದೆ. ಕಾಮಗಾರಿ ನಿರ್ವಹಿಸದೇ, ಕಾಮಗಾರಿ ಅರ್ಧ ಮಾಡಿದ್ದರೂ ಪೂರ್ತಿ ಬಿಲ್ ಪಾವತಿ, ಬೇರೆ ಇಲಾಖೆ, ಏಜನ್ಸಿ ಮಾಡಿರುವ ಕಾಮಗಾರಿಗೆ ಬಿಲ್ ಎತ್ತುವಳಿ ಮಾಡಿದ್ದು, ತನಿಖೆ ವೇಳೆ ಕಂಡುಬಂದಿದೆ. ಈ ಅವ್ಯವಹಾರ ನಡೆದಾಗ ಆರೋಪಿ ಝಡ್.ಎಂ.ಚಿಂಚೊಳ್ಳಿಕರ ಜೆಇ, ಎಇ ಮತ್ತು ಎಇಇ, ಇಇ ಎಸ್ಇ ಎಲ್ಲ ಹುದ್ದೆಯಲ್ಲೂ ಇವರೇ ಚಾರ್ಜ್ ಇದ್ದರು ಎಂಬುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.