ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ ಬೆನ್ನಲ್ಲೇ ಅವರ ಸಹೋದರ ಸೇರಿ ನಾಲ್ವರಿಗೆ ನೋಟಿಸ್ ನೀಡಿದ್ದಾರೆ.
ಸಹೋದರ ಆಶಿಕ್ ರೈ, ಸ್ನೇಹಿತರಾದ ಗೌರವ್, ಹರ್ಷವರ್ಧನ್ ಸೇರಿ ನಾಲ್ವರಿಗೆ ನೋಟಿಸ್ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬಂಧಿತ ತಹಶೀಲ್ದಾರ್ ಅಜಿತ್ ರೈ ವಾಚ್ ಕಲೆಕ್ಷನ್ ನೋಡಿ ದಂಗಾದ ಲೋಕಾ ಅಧಿಕಾರಿಗಳು
Advertisement
Advertisement
ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಹಕಾರನಗರದ ನಿವಾಸ ಸೇರಿ 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು.
Advertisement
ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ – ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಅರೆಸ್ಟ್
Advertisement
ಇಂದು ಬೆಳಗ್ಗೆ 11 ಗಂಟೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆದಿದೆ. 10 ದಿನಗಳ ಕಾಲ ಅಜಿತ್‌ರನ್ನ ಪೊಲೀಸ್ ವಶಕ್ಕೆ ಪಡೆಯಲು ಲೋಕಾಯುಕ್ತ ತಯಾರಾಗಿದೆ. ಜೊತೆಗೆ ಸಹೋದರ ಹಾಗೂ ಸ್ನೇಹಿತರಿಗೂ ಡ್ರಿಲ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಹಲವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವ ಬಗ್ಗೆಯೂ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಸದ್ಯ ನಾಲ್ವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಲೋಕಾಯುಕ್ತ ಮುಂದಾಗಿದೆ.
Web Stories