ಬೆಂಗಳೂರು: ಕರ್ತವ್ಯ ಲೋಪ, ದುರಾಡಳಿತ, ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದ್ದ ಹಿನ್ನೆಲೆ ಲೋಕಾಯುಕ್ತ (Lokayukta) ಅಧಿಕಾರಿಗಳ ತಂಡ ಗುರುವಾರ ಬೆಂಗಳೂರಿನಾದ್ಯಂತ 45 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ.
ಲೋಕಾಯುಕ್ತ ಮುಖ್ಯನ್ಯಾಯಮೂರ್ತಿ ಬಿ.ಎಸ್ ಪಾಟೀಲ್ (BS Patil), ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಳಿಕ ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಕಡತ ಪರಿಶೀಲಿಸಿದ್ದಾರೆ.
ಕರ್ತವ್ಯ ಲೋಪ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ 83 ಬೆಸ್ಕಾಂ ಅಧಿಕಾರಿಗಳು ಹಾಗೂ 63 BWSSB ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಇಂದು (ಡಿ.19) ಮಧ್ಯಾಹ್ನ 3:30ರ ಸುಮಾರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ನ್ಯಾ. ಬಿ.ಎಸ್ ಪಾಟೀಲ್, ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಸಂಸ್ಥೆಗಳ ಮೇಲೆ ಸಾಕಷ್ಟು ದೂರುಗಳು ಬಂದಿತ್ತು. ಈ ಹಿನ್ನೆಲೆ ಏಕಕಾಲಕ್ಕೆ ರೇಡ್ ಮಾಡಿದ್ದೇವೆ ಎಂದು ತಿಳಿಸಿದರು.
ಒಟ್ಟು 45 ತಂಡಗಳು ಇವತ್ತು ಈ ಎರಡು ನಿಗಮದ ಕಚೇರಿಗಳ ಮೇಲೆ ಸರ್ಪೈಸ್ ವಿಸೀಟ್ ನೀಡಿವೆ. ಬೆಸ್ಕಾಂನ 83, ಜಲಮಂಡಳಿಯ 63 ಕಚೇರಿಗಳ ಮೇಲೆ ಕೇಸ್ ದಾಖಾಲಾಗಿದೆ. ಅದರಲ್ಲಿ ಇವತ್ತು 45 ಕಚೇರಿಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿ ಪರಿಶೀಲಿಸಿದ ಪ್ರತಿಯೊಂದು ಅಂಶವನ್ನ ದಾಖಲಿಸಿಕೊಂಡಿದ್ದೇವೆ. ಅದರ ವರದಿ ನೋಡಿ, ಅಧಿಕಾರಿಗಳ ತಪ್ಪು ಇದ್ದಲ್ಲಿ ನೋಟಿಸ್ ನೀಡುತ್ತೇವೆ. ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಾರ್ವಜನಿಕರಿಗೆ ಈ ಎರಡು ನಿಗಮದಲ್ಲಿ ಸಾಕಷ್ಟು ಸಮಸ್ಯೆಗಳು ಆಗ್ತಿದೆ ಅನ್ನೋ ಆರೋಪಗಳು ನಿರಂತರವಾಗಿ ಕೇಳಿಬರುತ್ತಿತ್ತು. ಭ್ರಷ್ಟಾಚಾರ ಮುಕ್ತ ಮಾಡೋದು ನಮ್ಮಗುರಿ. ನಾವು ಈಗ ಭೇಟಿ ನೀಡಿದ್ದ ಜಲಮಂಡಳಿಯ ಕಚೇರಿ ಒಂದರಲ್ಲಿ 20 ಸಿಬ್ಬಂದಿ ಎಂದು ದಾಖಲಾತಿಯಲ್ಲಿದೆ. ಅದ್ರೇ ಅಲ್ಲಿದ್ದದ್ದು ಬರೀ 7 ಜನ ಮಾತ್ರ. ಅಲ್ಲದೇ ಬೆಸ್ಕಾಂ ಕಚೇರಿಯಲ್ಲಿ ಹಾಜರಾತಿ, ಮೂಮೆಂಟ್ ಬುಕ್ ಇಲ್ಲ, ಇದನೇಲ್ಲ ಗಮಿಸಿದ್ದೇವೆ. ಹಾಜರಾತಿ ಪುಸ್ತಕವೇ ಇಲ್ಲ ಅಂದ್ರೆ ಹೇಗೆ ಕೆಲಸ ನಡೆಯುತ್ತೆ? ಸದ್ಯ ನಾವು ದಾಖಲಿಸಿಕೊಂಡಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ, ಆರೋಪಗಳು ಸಾಬೀತಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.