– ಪಾಲಾರ್, ಪೆನ್ನಾರ್ ಮತ್ತು ಚಿತ್ರಾವತಿ ನದಿಗಳಲ್ಲಿ ವಿಶೇಷ ಜಲಾನಯನ ಯೋಜನೆ ಅಗತ್ಯ
– ಕೃಷ್ಣಾ ನದಿಯಿಂದ ಕನಿಷ್ಠ 5 ಟಿಎಂಸಿ ನೀರು ಪೂರೈಸಬಹುದು
ನವದೆಹಲಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ (Chikkaballapur Lok Sabha Constituency) ಹಾಗೂ ಪಕ್ಕದ ಕೋಲಾರ, ತುಮಕೂರು ಜಿಲ್ಲೆಗಳು 2023 ನೇ ವರ್ಷದಲ್ಲಿ ತೀವ್ರ ಬರಗಾಲ ಎದುರಿಸಿದ್ದು, ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ (Dr Sudhakar) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement
ಸಂಸತ್ತು ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಕುಡಿಯುವ ನೀರು ಹಾಗೂ ಕೃಷಿಗಾಗಿ ಕೈಗೊಳ್ಳಬೇಕಿರುವ ಶಾಶ್ವತ ಪರಿಹಾರ ಯೋಜನೆ ಹಾಗೂ ಕ್ರಮಗಳ ಬಗ್ಗೆ ವಿವರಿಸಿದರು.
Advertisement
Advertisement
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಈ ಭಾಗದ ನೀರಾವರಿ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತಂತೆ ನಿಯಮ 377ರ ಅಡಿಯಲ್ಲಿ ಇಂದು ಲೋಕಸಭೆಯ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.
ನೆರೆಯ ಆಂಧ್ರಪ್ರದೇಶದ ಕೃಷ್ಣಾ ನದಿಯಿಂದ ನಾಲೆ ನಿರ್ಮಿಸಿ… pic.twitter.com/faRHSeHwcf
— Dr Sudhakar K (@DrSudhakar_) July 22, 2024
Advertisement
ಕರ್ನಾಟಕ (Karnataka) ರಾಜ್ಯ 2023 ನೇ ವರ್ಷದಲ್ಲಿ ತೀವ್ರವಾದ ಬರಗಾಲವನ್ನು (Drought) ಎದುರಿಸಿದೆ. ರಾಜ್ಯದ ಬಹುತೇಕ ಎಲ್ಲ ತಾಲೂಕುಗಳಲ್ಲಿ ಬರಗಾಲವು ತೀವ್ರ ದುಷ್ಪರಿಣಾಮ ಬೀರಿದೆ. ಅದರಲ್ಲೂ ಸಣ್ಣ ರೈತರು ಬಹಳ ಕೆಟ್ಟ ಪರಿಸ್ಥಿತಿ ಎದುರಿಸಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶದಲ್ಲಿ ಹೆಚ್ಚು ರೈತರಿದ್ದಾರೆ. ಈ ಭಾಗದ ಜನರು ಬೆಂಗಳೂರು ಮಹಾನಗರದ ಸುಸ್ಥಿರತೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ದುರದೃಷ್ಟವಶಾತ್ ಈ ಜಿಲ್ಲೆಗಳಲ್ಲಿ ಕೆಲವು ವರ್ಷಗಳಿಂದ ಅಂತರ್ಜಲದ ಮಟ್ಟ ತೀರಾ ಕುಸಿದಿದೆ. ಅಂತರ್ಜಲದ ಮಟ್ಟ 1,500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ಈ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು, ರಾಜ್ಯ ಸರ್ಕಾರ ಸಂಸ್ಕರಿತ ನೀರನ್ನು (STP) ಈ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿದೆ. ಇದರಿಂದ ಯಾವೆಲ್ಲ ಪರಿಣಾಮವಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ 80 ಲಕ್ಷ ಜನರು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ಹೀಗೆ ಎಸ್‌ಟಿಪಿ ನೀರನ್ನು ಕೆರೆ ತುಂಬಿಸಲು, ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿರುವುದು ಇಡೀ ದೇಶದಲ್ಲೇ ಮೊದಲು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆ – ಬಡವರಿಗೆ 9 ವರ್ಷದಲ್ಲಿ 2.63 ಕೋಟಿ ಮನೆ ನಿರ್ಮಾಣ
ಕೃಷ್ಣಾ ನದಿಯಿಂದ ಕನಿಷ್ಠ 5 ಟಿಎಂಸಿ ನೀರನ್ನು ಈ ಭಾಗಕ್ಕೆ ಸರಬರಾಜು ಮಾಡಬಹುದು. ಇದಕ್ಕಾಗಿ ಕಾಲುವೆಗಳನ್ನು ನಿರ್ಮಾಣ ಮಾಡಬಹುದು. ಹಾಗೆಯೇ ಎತ್ತಿನಹೊಳೆ (Ettinahole) ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು ಕೂಡ ಇದಕ್ಕೆ ಪರಿಹಾರವಾಗಲಿದೆ. ಜೊತೆಗೆ, ಪಾಲಾರ್, ಪೆನ್ನಾರ್ ಮತ್ತು ಚಿತ್ರಾವತಿ ನದಿಗಳಲ್ಲಿ ವಿಶೇಷ ಜಲಾನಯನ ಯೋಜನೆ ರೂಪಿಸುವುದು ಕೂಡ ಉತ್ತಮ ಪರಿಹಾರ. ಈ ನದಿಗಳ ಜಲಾನಯನ ಪ್ರದೇಶ, ಅಚ್ಚಕಟ್ಟು ಪ್ರದೇಶವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಆದ್ಯತೆಯ ಮೇರೆಗೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು. ಇದರ ಜೊತೆಗೆ, ಗ್ರಾಮಗಳ ಕೆರೆಗಳು ಸೇರಿದಂತೆ ಎಲ್ಲ ಜಲಮೂಲಗಳನ್ನು ಪುನಶ್ಚೇತನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಈ ಪ್ರದೇಶದ ಜನರು ಮಾತ್ರವಲ್ಲದೆ, ಜಾನುವಾರು, ಹಾಗೂ ಪರಿಸರವನ್ನು ಉಳಿಸಲು ಶಾಶ್ವತವಾದ ಪರಿಹಾರವನ್ನು ನೀಡಬೇಕೆಂಬ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕಳಕಳಿಯಿಂದ ಕೇಂದ್ರ ಸರ್ಕಾರಕ್ಕೆ ಕೋರುತ್ತೇನೆ ಎಂದು ಅವರು ಮನವಿ ಸಲ್ಲಿಸಿದರು.