ಚೆನ್ನೈ: ತಮಿಳುನಾಡಿನ ವೆಲ್ಲೂರು ಲೋಕಸಭಾ ಚುನಾವಣೆ ರದ್ದುಗೊಳಿಸಲು ಚುನಾವಣಾ ಆಯೋಗ ಸಲ್ಲಿಸಿದ್ದ ಪತ್ರಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಒಪ್ಪಿಗೆ ಸೂಚಿಸಿದ್ದಾರೆ.
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಡಿಎಂಕೆ ಮುಖಂಡರ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲು ಅನುಮತಿ ಕೋರಿ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಪತ್ರ ಬರೆದಿತ್ತು.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗವು, ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಗೊಳಿಸಲು ಏಪ್ರಿಲ್ 14ರಂದು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿತ್ತು. ಅವರು ಶಿಫಾರಸನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ.
Advertisement
ಈ ಮೂಲಕ ಇದೇ ಮೊದಲ ಬಾರಿಗೆ ಹಣ ದುರ್ಬಳಕೆ ಆರೋಪದ ಮೇಲೆ ರಾಷ್ಟ್ರಪತಿಗಳಿಂದ ಅನುಮತಿ ಪಡೆದು ಲೋಕಸಭಾ ಕ್ಷೇತ್ರವೊಂದರ ಚುನಾವಣೆ ರದ್ದು ಮಾಡಲಾಗಿದೆ.
Advertisement
ಆಗಿದ್ದೇನು?:
ತಮಿಳುನಾಡಿನಲ್ಲಿ ವೆಲ್ಲೂರು ಸೇರಿದಂತೆ 38 ಲೋಕಸಭಾ ಕ್ಷೇತ್ರ ಚುನಾವಣೆ ಏಪ್ರಿಲ್ 18ರಂದು ನಿಗದಿಯಾಗಿತ್ತು. ವೆಲ್ಲೂರು ಕ್ಷೇತ್ರದಿಂದ ಒಟ್ಟು 23 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ಡಿಎಂಕೆ ನಾಯಕ ದೊರೈ ಮುರುಗನ್ ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆಯು ಏಪ್ರಿಲ್ 10ರಂದು ದಾಳಿ ಮಾಡಿತ್ತು. ಈ ವೇಳೆ ಅವರ ಗೋದಾಮಿನಲ್ಲಿ ಬರೋಬ್ಬರಿ 11.53 ಕೋಟಿ ರೂ. ಹಣ ಪತ್ತೆಯಾಗಿತ್ತು. ಹೀಗಾಗಿ ಈ ಹಣವು ದೊರೈ ಮುರುಗನ್ ಅವರಿಗೆ ಸೇರಿದ್ದು ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿದ್ದವು.
ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾಗಿದ್ದರಿಂದ ಹಣದಿಂದ ಮತದಾರರನ್ನು ಓಲೈಸುವ ಪ್ರಯತ್ನ ನಡೆಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಚುನಾವಣಾ ಆಯೋಗವು ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ರದ್ದು ಮಾಡಲು ಅನುಮತಿ ಕೋರಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿತ್ತು.