ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಮಹಾತೀರ್ಪಿಗೆ (Loksabha Election Result 2024) ಇದೀಗ ಕ್ಷಣಗಣನೆ ಆರಂಭವಾಗಿದೆ. 7 ಹಂತಗಳಲ್ಲಿ ನಡೆದ ಚುನಾವಣಾ ಹಬ್ಬದ ಮಹಾ ಫಲಿತಾಂಶಕ್ಕಾಗಿ ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿದೆ.
ಮತ ಎಣಿಕೆಗೆ ಅಂತಿಮ ಹಂತದ ಸಿದ್ದತೆಗಳು ಎಲ್ಲಾ ಕಡೆ ಮುಗಿದಿವೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮೊದಲಿಗೆ ಅಂಚೆ ಮತಗಳು ಮತ್ತು ಹಿರಿಯ ಮತದಾರರ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅರ್ಧ ಗಂಟೆ ನಂತರ ಇವಿಎಂ ಮತಗಳ ಎಣಿಕೆ ಕಾರ್ಯ ಶುರುವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ನಿಖರ ಟ್ರೆಂಡ್ ಗೊತ್ತಾಗುವ ನಿರೀಕ್ಷೆ ಇದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಸೆಂಟ್ ಜೋಸೆಫ್ ಕಾಲೇಜಿಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜಿನಲ್ಲಿ ನಡೆಯಲಿದೆ.
ಬೆಂಗಳೂರು ಗ್ರಾಮಾಂತರದ ಮತ ಎಣಿಕೆ ರಾಮನಗರದಲ್ಲಿ, ಬೆಳಗಾವಿ ಮತ ಎಣಿಕೆ ಬೆಳಗಾವಿಯಲ್ಲಿ, ಚಿಕ್ಕೋಡಿ ಮತ ಎಣಿಕೆ ಚಿಕ್ಕೋಡಿಯಲ್ಲಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಉಡುಪಿಯಲ್ಲಿ, ಮೈಸೂರು-ಮಡಿಕೇರಿ ಕ್ಷೇತ್ರದ ಮತ ಎಣಿಕೆ ಮೈಸೂರಿನಲ್ಲಿ ಇನ್ನುಳಿದಂತೆ ಆಯಾ ಕ್ಷೇತ್ರಗಳ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟ ಆಗಲಿದೆ.
ಈಗಾಗಲೇ ಎಕ್ಸಿಟ್ ಪೋಲ್‍ಗಳಲ್ಲಿ ಎನ್‍ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಅಂತ ಹೇಳುತ್ತಿದ್ದರೂ, ಐಎನ್‍ಡಿಐಎ ಮೈತ್ರಿಕೂಟದ ಉತ್ಸಾಹವೇನೂ ಕುಗ್ಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಹ್ಯಾಟ್ರಿಕ್ ರಾಜ್ಯಭಾರದ ನಿರೀಕ್ಷೆಯಲ್ಲಿದ್ದಾರೆ. 27 ಪಕ್ಷಗಳ ಮೈತ್ರಿಕೂಟ ಕಟ್ಟಿಕೊಂಡಿರೋ ಇಂಡಿ ಒಕ್ಕೂಟ ಕೂಡ ಅಧಿಕಾರದ ಹಿಡಿಯುವ ನಂಬಿಕೆಯಲ್ಲಿದೆ.
ಇದೇ ಹೊತ್ತಲ್ಲಿ ಸೋಮವಾರ ಕೇಂದ್ರ ಚುನಾವಣಾ ಆಯೋಗ ವಿಶೇಷ ಸುದ್ದಿಗೋಷ್ಠಿ ನಡೆಸಿದೆ. ಚುನಾವಣೆ ಮುಗಿಯುವ ಹೊತ್ತಲ್ಲಿ ಚುನಾವಣಾ ಆಯೋಗ ಹೀಗೆ ಸುದ್ದಿಗೋಷ್ಠಿ ನಡೆಸಿರೋದು ದೇಶದ ಚುನಾವಣಾ ಇತಿಹಾಸದಲ್ಲಿಯೇ ಇದೇ ಮೊದಲು.. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ವಿವರ ನೀಡಿದ್ರು.
ಮತ ಹಬ್ಬದ ವಿಶೇಷ: 96.88 ಕೋಟಿ ಮತದಾರರ ಪೈಕಿ 64.2 ಕೋಟಿ ಮಂದಿ ಮತದಾನ ಮಾಡಿದ್ದಾರೆ. 31.2 ಕೋಟಿ ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. 10.5 ಲಕ್ಷ ಮತಗಟ್ಟೆಗಳಲ್ಲಿ 1.5 ಕೋಟಿ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. 135 ಪ್ರತ್ಯೇಕ ರೈಲು ಸೇರಿ 4 ಲಕ್ಷ ವಾಹನಗಳ ಬಳಕೆ ಮಾಡಲಾಗಿದೆ. 27 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಮರುಮತದಾನ ನಡೆದಿಲ್ಲ. ಈ ಬಾರಿ ಕೇವಲ 39 ಕಡೆ ಮಾತ್ರ ಮರುಮತದಾನ ನಡೆದಿದೆ.
2019ರಲ್ಲಿ 540 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿತ್ತು. ಕಳೆದ ನಾಲ್ಕು ದಶಕಕ್ಕೆ ಹೋಲಿಸಿದ್ರೆ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಮತದಾನವಾಗಿದೆ. (ಜಮ್ಮು ಕಾಶ್ಮೀರದಲ್ಲಿ 58.58ರಷ್ಟು ಮತದಾನ.. ಕಣಿವೆಯಲ್ಲಿ 51.05ರಷ್ಟು ಮತದಾನ). ಹಿಂಸಾಚಾರಪೀಡಿತ ಮಣಿಪುರದಲ್ಲಿಯೂ 61.84%ರಷ್ಟು ಮತದಾನ ನಡೆದಿದೆ. ನಗದು ಪ್ರವಾಹಕ್ಕೆ ಆಯೋಗ ತಡೆ ನೀಡಿದ್ದು, 10 ಸಾವಿರ ಕೋಟಿ ಮೌಲ್ಯದ (4391 ಕೋಟಿ ಮೌಲ್ಯದ ಡ್ರಗ್ಸ್, 1054 ಕೊಟಿ ನಗದು.. 898 ಕೋಟಿ ಮೌಲ್ಯದ ಮದ್ಯ, 1459 ಕೋಟಿ ಮೌಲ್ಯದ ಚಿನ್ನಾಭರಣ..2198 ಕೋಟಿ ಮೌಲ್ಯದ ಗಿಫ್ಟ್) ವಸ್ತುಗಳು ಸೀಜ್ ಆಗಿದೆ.
2019ರಲ್ಲಿ 3500 ಕೋಟಿ ಮೌಲ್ಯದ ವಸ್ತುಗಳು ಸೀಜ್ ಮಾಡಲಾಗಿತ್ತು. ಸಿ-ವಿಜಿಲ್ ಆಪ್ ಮೂಲಕ 4.56 ಲಕ್ಷ ದೂರು ಸ್ವೀಕಾರ.. 99.9% ದೂರುಗಳಿಗೆ ಪರಿಹಾರ ನೀಡಲಾಗಿದೆ. ಮತದಾನ ದಿನಗಳಲ್ಲಿ ಚುನಾವಣೆ ಬಗ್ಗೆ 62 ಕೋಟಿ ಜನ ಗೂಗಲ್ ಸರ್ಚ್ ಮಾಡಿದ್ದಾರೆ.