– ಮೈತ್ರಿಗೆ ಕಟ್ಟುಬಿದ್ದ ಮಾಜಿ ಸಿಎಂ ಕುಮಾರಸ್ವಾಮಿ
– ‘ಕೈ’ವಶವಾಗುತ್ತಾ.., ಮತ್ತೆ ಕಮಲ ಅರಳುತ್ತಾ?
ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ. ಆದರೂ ಸಣ್ಣಪುಟ್ಟ ಸಮುದಾಯದ ಅಭ್ಯರ್ಥಿಗಳಿಗೇ ಕ್ಷೇತ್ರದ ಜನ ಮಣೆ ಹಾಕುತ್ತಾ ಬಂದಿದ್ದರು. ಈಗಿನ ರಾಜಕೀಯ ಸನ್ನಿವೇಶ ಬದಲಾದಂತೆ ಕಾಣುತ್ತಿದೆ. ಆದರೆ 1977 ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಕೇವಲ ಇಬ್ಬರು ಮಾತ್ರ.
Advertisement
ಕ್ಷೇತ್ರ ಪರಿಚಯ
ಈ ಹಿಂದೆ ಚಿಕ್ಕಬಳ್ಳಾಪುರ (Chikkaballapura) ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿತ್ತು. 2008 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡಿತು. ಸ್ವತಂತ್ರವಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ 1977 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಜಿಲ್ಲೆಯು ಬೆಂಗಳೂರು ಗ್ರಾಮಾಂತರ ಭಾಗಗಳನ್ನೂ ಒಳಗೊಂಡಿದೆ. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?
Advertisement
Advertisement
ರಾಜಕೀಯ ಚಿತ್ರಣ ಹೇಗಿದೆ?
ಕಾಂಗ್ರೆಸ್‌ನ (Congress) ಭದ್ರಕೋಟೆಯಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಆದ್ರೆ ಈ ಬಾರಿ ಮರಳಿ ಕಾಂಗ್ರೆಸ್ ಕ್ಷೇತ್ರವನ್ನ ಕೈವಶ ಮಾಡಿಕೊಳ್ಳುವ ತವಕವಾದರೆ, ಇತ್ತ ಬಿಜೆಪಿ ಸಹ ಕ್ಷೇತ್ರವನ್ನ ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ತವಕದಲ್ಲಿದೆ. ಆದ್ರೆ ಎರಡು ಪಕ್ಷಗಳಲ್ಲೂ ಟಿಕೆಟ್‌ಗಾಗಿ ಫೈಟ್ ಜೋರಾಗಿದ್ದು, ಅಂತಿಮವಾಗಿ ಅಭ್ಯರ್ಥಿಗಳು ಯಾರು ಎಂಬ ಕೂತೂಹಲ ಎಲ್ಲರಲ್ಲಿ ಮನೆ ಮಾಡಿದೆ.
Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ (Lok Sabha Elections 2024) ಹಾಲಿ ಸಂಸದಾರಾಗಿ ಬಿಜೆಪಿಯಿಂದ (BJP) ಗೆದ್ದು ಬೀಗಿದ್ದ ಬಿ.ಎನ್.ಬಚ್ಚೇಗೌಡರಿದ್ದಾರೆ. ಆದ್ರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಈ ಬಾರಿ ಬಿ.ಎನ್.ಬಚ್ಚೇಗೌಡರು ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದು, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರಿರುವ ಕಾರಣ ಈ ಬಾರಿ ಬಿಜೆಪಿಯಿಂದ ಹೊಸಬರು ಸ್ಪರ್ಧೆ ಮಾಡುವ ಸಾಧ್ಯತೆಯೇ ಹೆಚ್ಚಾಗಿದೆ. ಕಾಂಗ್ರೆಸ್‌ನಿಂದ ಯಾರು ಎನ್ನುವ ಕುತೂಹಲವೂ ಮನೆ ಮಾಡಿದೆ.
8 ವಿಧಾನಸಭಾ ಕ್ಷೇತ್ರಗಳು
ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಹಾಗೂ ಬೆಂಗಳೂರು ನಗರ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಯಲಹಂಕ. ಇದನ್ನೂ ಓದಿ: Lok Sabha 2024: ಬೀದರ್‌ನಲ್ಲಿ ಬಿಜೆಪಿಗೆ ಮೈತ್ರಿ ಬಲ?- ಕಾಂಗ್ರೆಸ್‌ಗೆ ವರವಾಗುತ್ತಾ ‘ಕಮಲ’ ಟಿಕೆಟ್ ಒಳಜಗಳ?
ಒಟ್ಟು ಮತದಾರರ ಸಂಖ್ಯೆ ಎಷ್ಟು?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 19,50,000 ಮತದಾರರಿದ್ದಾರೆ.
ಮಹಿಳಾ ಮತದಾರರು – 9,80,641
ಪುರುಷ ಮತದಾರರು – 9,69,538
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
ಕಳೆದ 2019 ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಖಾಡಕ್ಕಿಳಿದಿದ್ದರು. ಚುನಾವಣೆಯಲ್ಲಿ 7,45,912 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು. ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಮಾಜಿ ಸಿಎಂ ವೀರಪ್ಪ ಮೊಯ್ಲಿ 5,63,802 ಮತಗಳನ್ನ ಪಡೆದಿದ್ದರು. ವೀರಪ್ಪ ಮೊಯ್ಲಿಯವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದರೂ 1,82,110 ಮತಗಳ ಅಂತರದಿಂದ ಸೋಲನುಭವಿಸಿದ್ರು. 2014 ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್-ಬಿಜೆಪಿಯ ತ್ರಿಕೋನ ಸ್ಪರ್ಧೆಯಿಂದ ಕಡಿಮೆ ಮತಗಳ ಅಂತರದಿಂದ ಬಿಜೆಪಿಯ ಬಿ.ಎನ್.ಬಚ್ಚೇಗೌಡ (9,520 ಮತಗಳಿಂದ) ಸೋಲುನುಭವಿಸಿದ್ರು.
ಈ ಬಾರಿಯ ಆಕಾಂಕ್ಷಿಗಳು ಯಾರು?
ಕಾಂಗ್ರೆಸ್ ಟಿಕೆಟ್‌ಗಾಗಿ ವೀರಪ್ಪ ಮೊಯ್ಲಿ-ರಕ್ಷರಾಮಯ್ಯ ನಡುವೆ ಫೈಟ್ ಇದೆ. ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್ ವರ್ಸಸ್ ಅಲೋಕ್ ವಿಶ್ವನಾಥ್ ಹಾಗೂ ಇತರರು ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ: Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ನಗೆ ಬೀರ್ತಾರಾ ಕರಂದ್ಲಾಜೆ?
ಜೆಡಿಎಸ್ ಕಥೆ ಏನು?
ಹಾಲಿ ಸಂಸದ ಬಚ್ಚೇಗೌಡರ ವಯೋಸಹಜ ಸಮಸ್ಯೆ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಕೂತೂಹಲವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲುನುಭವಿಸಿರುವ ಮಾಜಿ ಸಚಿವ ಡಾ. ಕೆ.ಸುಧಾಕರ್ ಈಗ ಲೋಕಸಭೆಯತ್ತ ಚಿತ್ತ ಹರಿಸಿದ್ದಾರೆ. ಈಗಾಗಲೇ ದೆಹಲಿಗೆ ಭೇಟಿ ಮಾಡಿ ಘಟಾನುಘಟಿ ನಾಯಕರ ಜೊತೆ ಟಿಕೆಟ್ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಇನ್ನೂ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲೂ ಸಹ ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರ ಭೇಟಿ ಮಾಡಿ ಸಹಕಾರ ಸಹ ಕೋರಲಾಗಿದೆ. ಮತ್ತೊಂದೆಡೆ ಬಿಜೆಪಿಯಿಂದ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಸಹ ಅವರ ಪುತ್ರ ಅಲೋಕ್ ವಿಶ್ವನಾಥ್‌ರನ್ನ ಕಣಕ್ಕಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇನ್ನೂ ಕಾಂಗ್ರೆಸ್‌ನಿಂದ ಎರಡು ಬಾರಿ ಚಿಕ್ಕಬಳ್ಳಾಪುರ ಸಂಸದರಾಗಿ ಮೂರನೇ ಬಾರಿ ಅಂದರೆ ಕಳೆದ ಬಾರಿ ಸೋಲುನುಭವಿಸಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಈ ಬಾರಿ ಮರುಸ್ಪರ್ಧೆ ಬಯಸಿದ್ದಾರೆ. ಆದ್ರೆ ವೀರಪ್ಪ ಮೊಯ್ಲಿ ವಿರುದ್ಧವೇ ಸೆಟೆದು ನಿಂತಿರುವ ಕಾಂಗ್ರೆಸ್ ಯುವ ನಾಯಕ ಮಾಜಿ ಸಚಿವ ಸೀತಾರಾಂ ಅವರ ಪುತ್ರ ರಕ್ಷಾರಾಮಯ್ಯ ಸಹ ಅಖಾಡಕ್ಕಿಳಿಯಲು ಸಕಲ ತಯಾರಿಗಳನ್ನ ನಡೆಸಿದ್ದಾರೆ. ಇನ್ನೂ ಹಲವರ ಹೆಸರುಗಳು ಕೇಳಿ ಬರುತ್ತಿದ್ದು ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆಯೋ ಅನ್ನೋ ಕೂತೂಹಲ ಮನೆ ಮಾಡಿದೆ. ಇವೆಲ್ಲದರ ನಡುವೆ ಜೆಡಿಎಸ್ ಸಹ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಕೇಳಿದೆ ಎನ್ನಲಾಗಿದ್ದು ಜೆಡಿಎಎಸ್‌ಗೆ ಬಿಜೆಪಿ ಕ್ಷೇತ್ರ ಬಿಟ್ಟುಕೊಟ್ಟರೆ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಸಹ ಸಾಕಷ್ಟು ಕೂತೂಹಲವಾಗಿದೆ.
ಕ್ಷೇತ್ರದ ಪಾರುಪತ್ಯ
ಕಾಂಗ್ರೆಸ್-ಜೆಡಿಎಸ್‌ನ ಪಾರುಪತ್ಯವಿದ್ದ ಕ್ಷೇತ್ರದಲ್ಲಿ 2019 ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ, ಮೋದಿಯ ಅಲೆ, ಒಕ್ಕಲಿಗ ಮತಗಳ ಪ್ರಾಬಲ್ಯದಿಂದ ಬಿಜೆಪಿ ಪಕ್ಷ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿತ್ತು. ಒಕ್ಕಲಿಗ ಮತದಾರರು ಹೆಚ್ಚಿರುವ ಕ್ಷೇತ್ರವಿದು. ಇನ್ನೂ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಇನ್ನೂ ವಿಧಾನಸಭೆ ಸೋಲಿನಿಂದ ಕಂಗೆಟ್ಟಿರುವ ಮಾಜಿ ಸಚಿವ ಸುಧಾಕರ್ ಲೋಕಸಭೆ ಟಿಕೆಟ್ ಪಡೆದು ಸಂಸದರಾಗಿ ವಿರೋಧಿಗಳಿಗೆ ಶಾಕ್ ಕೊಡುವ ತಯಾರಿಯಲ್ಲಿದ್ದರೆ, ಇತ್ತ ಮಗನನ್ನೇ ಲೋಕಸಭೆಗೆ ಇಳಿಸಬೇಕು ಎಂದು ವಿಶ್ವನಾಥ್ ಅವರು ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ವೀರಪ್ಪ ಮೊಯ್ಲಿ ಹಾಗೂ ರಕ್ಷರಾಮಯ್ಯ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದ್ದು ಯಾರಿಗೆ ಟಿಕೆಟ್ ಒಲಿಯಲಿದೆ ಎಂಬುದು ನಿಗೂಢವಾಗಿದೆ. ಕೊನೆ ಚುನಾವಣೆ ಅಂತ ಮೊಯ್ಲಿ ಯವರು ಶತಾಯಗತಾಯ ಪ್ರಯತ್ನಗಳಲ್ಲಿದ್ರೆ ಮೊದಲ ಚುನಾವಣೆ ಈ ಬಾರಿ ಲೋಕಸಭಾ ಅಖಾಡಕ್ಕೆ ಧುಮಕಲೇಬೇಕು ಅಂತ ರಕ್ಷರಾಮಯ್ಯ ಸಹ ತೀವ್ರ ಫೈಟ್ ಕೊಡ್ತಿದ್ದಾರೆ.
ಮೈತ್ರಿಯಿಂದ ಯಾರಿಗೆ ಲಾಭ?
ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಜೆಪಿ ಪಾಲಿಗೆ ಲಾಭವಾಗಿತ್ತು. ಆದ್ರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್‌ಗೆ ಲಾಭದಾಯಕವಾಗುತ್ತಾ ಕಾದು ನೋಡಬೇಕಿದೆ.
ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಸುಧಾಕರ್ ಕಣಕ್ಕಿಳಿದರೆ, ಜಾತಿ ಬಲ, ವೈಯಕ್ತಿಕ ವರ್ಚಸ್ಸು, ಹಣಬಲ, ರಾಜಕೀಯ ಅನುಭವ, ಎರಡು ಜಿಲ್ಲೆಯಲ್ಲಿ ಉಸ್ತುವಾರಿಗಳಾಗಿದ್ದವರು, ವಿಧಾನಸಭೆ ಚುನಾವಣೆ ಸೋಲಿನ ಅನುಕಂಪ, ತಮ್ಮ ಪ್ರಭಾವ ಚುನಾವಣೆಗೆ ಲಾಭದಾಯಕವೂ ಆಗಬಹುದು. ಆದ್ರೆ ಅವರದ್ದೇ ಬಿಜೆಪಿಯ ಪಾಳೆಯದ ಕೆಲ ವಿರೋಧಿಗಳ ನಡೆ ಏನು ಎಂಬುದು ಕುತೂಹಲವಾಗಲಿದೆ. ಇನ್ನೂ ಅಲೋಕ್ ವಿಶ್ವನಾಥ್ ಅಖಾಡಕ್ಕೆ ಬಂದರೆ ಬೆಂಗಳೂರು ಗ್ರಾಮಾಂತರ ಯಲಹಂಕದಲ್ಲಿ ಮಾತ್ರ ಪರಿಚಿತರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಖ ಪರಿಚಯ ತೀರಾ ಕಡಿಮೆ ಇದು. ಇದು ಮೈನಸ್ ಸಹ ಆಗಬಹುದು. ಇನ್ನೂ ಕಳೆದ ಬಾರಿ ವಿಶೇಷ ಅಂದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಜೆಪಿಗೆ ಲಾಭವಾಗಿತ್ತು.
ಇತ್ತ ಕಾಂಗ್ರೆಸ್‌ನಲ್ಲಿ ರಕ್ಷರಾಮಯ್ಯಗೆ ಜಾತಿ ಬಲ, ಪಕ್ಷ ಬಲ, ಹಣಬಲವಿದೆ. ವೀರಪ್ಪ ಮೊಯ್ಲಿಯವರಿಗೆ ಹೈಕಮಾಂಡ್ ಜೊತೆ ಹತ್ತಿರದ ಸಂಪರ್ಕ, ಹಿರಿಯ ರಾಜಕಾರಣಿ, ರಾಜಕೀಯ ಅನುಭವ ಲಾಭದಾಯಕವಾಗಬಹುದಾಗಿದೆ. ನೇರಾನೇರ ಹೇಳುವುದಾದರೆ ಸುಧಾಕರ್ ವರ್ಸಸ್ ರಕ್ಷರಾಮಯ್ಯ ನಡುವೆ ನೇರಾಹಣಾಹಣಿ ನಡೆಯಲಿದೆ. ವೀರಪ್ಪ ಮೊಯ್ಲಿ ವರ್ಸಸ್ ಸುಧಾಕರ್ ಆದರೆ ಸುಧಾಕರ್‌ಗೆ ಸುಲಭ ಗೆಲುವಾಗಲಿದೆ ಅನ್ನೋ ಲೆಕ್ಕಾಚಾರಗಳು ಜನಮಾನಸದಲ್ಲಿ ಕೇಳಿಬರುತ್ತಿವೆ. ಇದನ್ನೂ ಓದಿ: Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ
ಯಾವ ಅವಧಿಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದಿತ್ತು?
2009 – (ಕಾಂಗ್ರೆಸ್): ವೀರಪ್ಪ ಮೊಯ್ಲಿ – 3,90,500 ಮತಗಳು
2014 – (ಕಾಂಗ್ರೆಸ್): ವೀರಪ್ಪ ಮೊಯ್ಲಿ – 4,24,800 ಮತಗಳು
2019 – (ಬಿಜೆಪಿ) ಬಿ.ಎನ್.ಬಚ್ಚೇಗೌಡ – 7,45,912 ಮತಗಳು
ಜಾತಿ ಲೆಕ್ಕಾಚಾರ
ಒಕ್ಕಲಿಗರು- 4,50,000
ಎಸ್ಸಿ – 5,50,000
ಬಲಿಜಿಗ – 2,50,000
ಮುಸ್ಲಿಂ – 2 ಲಕ್ಷ
ಲಿಂಗಾಯತರು, ಬ್ರಾಹ್ಮಣರು – 1 ಲಕ್ಷ
ಕುರುಬರು – 1 ಲಕ್ಷ
ಇತರೆ – 3 ಲಕ್ಷ