ಲೋಕಸಭೆಗೆ ಶುಕ್ರವಾರ ಮೊದಲ ಹಂತದ ಮತದಾನ – 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಎಲೆಕ್ಷನ್

Public TV
2 Min Read
ELECTION

ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) ಮೊದಲ‌ ಹಂತದ ಮತದಾನ (First Phase Vote) ಶುಕ್ರವಾರ ನಡೆಯಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮತದಾನದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗ (Election Commission) ಎಲ್ಲ ತಯಾರಿ ಮಾಡಿಕೊಂಡಿದೆ. 102 ಕ್ಷೇತ್ರಗಳ ಪೈಕಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಲಿದೆ. ವ್ಯವಸ್ಥಿತ ಚುನಾವಣೆಗಾಗಿ 1.87 ಲಕ್ಷ ಮತಗಟ್ಟೆಗಳ ನಿರ್ಮಾಣ ಮಾಡಿದ್ದು 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಿದೆ.

8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿ ಒಟ್ಟು 16.63 ಕೋಟಿ ಮತದಾರರು ಮೊದಲ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಇದರಲ್ಲಿ 3.51 ಕೋಟಿ ಯುವ ಮತದಾರರಿದ್ದು 35.67 ಲಕ್ಷ ಯುವ ಸಮೂಹ ಮೊದಲ ಸಲ ವೋಟಿಂಗ್ ಮಾಡಿದರೆ 14.14 ಲಕ್ಷ 85+ ವಯಸ್ಸಿನ ಹಿರಿಯ ಮತದಾರರು ತಮ್ಮ‌ ಚಲಾಯಿಸಲಿದ್ದರೆ. ಮೊದಲ ಹಂತದಲ್ಲಿ 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು: ಆಪ್ ಸಚಿವೆ ಅತಿಶಿ ಗಂಭೀರ ಆರೋಪ

ಚುನಾವಣಾ ಕಾರ್ಯಗಳಿಗೆ 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಅಕ್ರಮ ತಡೆಯಲು 127 ಸಾಮಾನ್ಯ, 67 ಪೊಲೀಸ್, 167 ಖರ್ಚು ವೆಚ್ಚ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರನ್ನ ಆಯೋಗ ನೇಮಕ ಮಾಡಿದೆ.

ಚುನಾವಣೆ ನಡೆಯುತ್ತಿರುವ ರಾಜ್ಯಗಳು: ತಮಿಳುನಾಡಿನ ಎಲ್ಲಾ 39, ಉತ್ತರಾಖಂಡದ ಎಲ್ಲಾ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಲಯದ ಎಲ್ಲಾ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ‌ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12 ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Share This Article