– ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ
– ‘ಕೈ’, ಕಮಲ ಟಿಕೆಟ್ ಯಾರಿಗೆ?
ಕರ್ನಾಟಕಕ್ಕೆ ಬೆಳಕು, ಅನ್ನ ನೀಡುವ ಜಿಲ್ಲೆ ರಾಯಚೂರು (Raichuru Loksabha Constituency). ಉತ್ತರಕ್ಕೆ ಕೃಷ್ಣ ಮತ್ತು ದಕ್ಷಿಣಕ್ಕೆ ತುಂಗಭದ್ರಾ ನದಿಯನ್ನು ಹೊಂದಿದೆ. ಬೆಂಕಿಯ ನಗರ ಎಂದೇ ಹೆಸರಾಗಿರುವ ರಾಯಚೂರಿನ ಬಹುತೇಕ ಪ್ರದೇಶ ಗಿಡಮರಗಳಿಲ್ಲದೇ ಬಯಲಿನಿಂದ ಕೂಡಿದೆ. ತುಂಗಭದ್ರಾ ಎಡದಂಡೆ ಕಾಲುವೆ ಆಸರೆಯಿಂದಾಗಿ ಇಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತದೆ. ಬಿರು ಬೇಸಿಗೆಯಂತೆಯೇ ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣಾ ರಾಜಕಾರಣದ ಬಿಸಿ ಏರುತ್ತಿದೆ. ಇದರ ಕಾವು ರಾಷ್ಟ್ರಮಟ್ಟಕ್ಕೂ ತಟ್ಟಿದೆ.
Advertisement
ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ರಾಯಚೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ (Congress) ಮತ್ತು ಬಿಜೆಪಿಗೆ (BJP) ನೇರ ಹಣಾಹಣೆಯ ಅಖಾಡ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಆಡಳಿತಕ್ಕೂ ಅವಕಾಶ ಮಾಡಿಕೊಟ್ಟಿದೆ. ಸದ್ಯ ರಾಯಚೂರು ಲೋಕಸಭೆ ಬಿಜೆಪಿ ವಶದಲ್ಲಿದೆ. ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಮತ್ತೆ ಕೈವಶಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. 1996 ರಲ್ಲಿ ರಾಜಾ ರಂಗಪ್ಪ ನಾಯ್ಕ ಒಮ್ಮೆ ಗೆದ್ದಿದ್ದು ಬಿಟ್ಟರೆ ಜೆಡಿಎಸ್ ಪ್ರಭಾವ ಇಲ್ಲಿ ಅಷ್ಟಾಗಿಲ್ಲ.
Advertisement
ಕ್ಷೇತ್ರ ಪರಿಚಯ
1952 ರಲ್ಲಿ ಯಾದಗಿರಿಯ ಭಾಗವಾಗಿತ್ತು. ನಂತರ ಪ್ರತ್ಯೇಕಗೊಂಡ ರಾಯಚೂರು ಕ್ಷೇತ್ರ 1957 ರಲ್ಲಿ ಮೊದಲ ಲೋಕಸಮರಕ್ಕೆ ನಾಂದಿ ಹಾಡಿತು. 1957 ರಿಂದ (1967 -ಸ್ವತಂತ್ರ ಪಕ್ಷ, 1996-ಜೆಡಿಎಸ್) 2008 ರವರೆಗೆ ಕಾಂಗ್ರೆಸ್ ಗೆದ್ದು ಬೀಗಿತ್ತು. 2009 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಣ್ಣ ಪಕೀರಪ್ಪ ಮೊದಲ ಗೆಲುವು ದಾಖಲಿಸಿದರು. ನಂತರ ಎರಡು ಅವಧಿಯಲ್ಲಿ (2014, 2019) ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಬಾರಿ ಗೆದ್ದಿವೆ. ಸದ್ಯ ಕ್ಷೇತ್ರ ಬಿಜೆಪಿ ಕೈವಶದಲ್ಲಿದೆ.
Advertisement
Advertisement
ಎಷ್ಟು ವಿಧಾನಸಭಾ ಕ್ಷೇತ್ರಗಳಿವೆ?
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ರಾಯಚೂರು ಜಿಲ್ಲೆಯ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಲಿಂಗಸುಗೂರು ಹಾಗೂ ಯಾದಗಿರಿ ಜಿಲ್ಲೆಯ ಸುರಪುರ, ಶಹಪುರ, ಯಾದಗಿರಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಒಟ್ಟು ಮತದಾರರು ಎಷ್ಟು?
ಕ್ಷೇತ್ರದಲ್ಲಿ ಒಟ್ಟು ಮತದಾರರು- 19,91,218 ಇದ್ದಾರೆ. ಅವರಲ್ಲಿ ಪುರುಷರು- 9,85,675 ಹಾಗೂ ಮಹಿಳೆಯರು- 10,05,246 ಜೊತೆಗೆ ತೃತೀಯ ಲಿಂಗಿ ಮತದಾರರು- 297 ಇದ್ದಾರೆ. ಇದನ್ನೂ ಓದಿ: Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?
ವಿಧಾನಸಭಾ ರಾಜಕೀಯ ಲೆಕ್ಕಾಚಾರವೇನು?
ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿಯ ರಾಜಾ ಅಮರೇಶ್ವರ ನಾಯಕ್ ಹಾಲಿ ಸಂಸದರಿದ್ದಾರೆ. ಈ ಕ್ಷೇತ್ರ ರಾಯಚೂರಿನ 5 ವಿಧಾನಸಭಾ ಕ್ಷೇತ್ರ ಹಾಗೂ ಯಾದಗಿರಿಯ 3 ವಿಧಾನಸಭಾ ಕ್ಷೇತ್ರಗಳನ್ನು (Vidhanasabha Constituency) ಒಳಗೊಂಡಿದೆ. ಸದ್ಯ 8 ಕ್ಷೇತ್ರಗಳಲ್ಲಿ 5 ರಲ್ಲಿ ಕಾಂಗ್ರೆಸ್, 2 ರಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಾಂಗ್ರೆಸ್ ನಿಂದ ವೆಂಕಟೇಶ್ ನಾಯಕ್ ನಾಲ್ಕು ಬಾರಿ ಸಂಸದರಾಗಿದ್ದು, ಅವರ ಪುತ್ರ ಬಿ.ವಿ.ನಾಯಕ್ ಒಂದು ಬಾರಿ ಸಂಸದರಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿರುವ ಬಿ.ವಿ.ನಾಯಕ್ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 1957 ರಿಂದ ಈ ವರೆಗೆ ಕಾಂಗ್ರೆಸ್ 13 ಬಾರಿ ,ಬಿಜೆಪಿ 2 ಬಾರಿ, ಜನತಾದಳ 1 ಬಾರಿ, ಸ್ವತಂತ್ರ ಪಕ್ಷ 1 ಬಾರಿ ಗೆಲುವು ಸಾಧಿಸಿದೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ವಿ.ನಾಯಕ್ ವಿರುದ್ಧ 1,17,716 ಮತಗಳ ಅಂತರದಿಂದ ಗೆದ್ದಿದ್ದರು. ಮೋದಿ ಅಲೆ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ಕಿತ್ತಾಟ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು:
ಪಕ್ಷದಿಂದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾಜಿ ಶಾಸಕ ರಾಜಾರಾಯಪ್ಪ ನಾಯಕ್, ಮುಖಂಡರಾದ ರವಿ ಪಾಟೀಲ್, ದೇವಣ್ಣ ನಾಯಕ್, ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಹೆಸರು ಅಭ್ಯರ್ಥಿಗಳ ಪಟ್ಟಿಯ ಮುಂಚೂಣಿಯಲ್ಲಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:
ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್, ಮಾಜಿ ಸಂಸದ ಬಿ.ವಿ.ನಾಯಕ್, ಮಾಜಿ ಸಚಿವ ರಾಜೂಗೌಡ, ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ಹೆಸರುಗಳು ಕೇಳಿಬರುತ್ತಿವೆ. ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸುರಪುರ ಆಕಾಂಕ್ಷಿಗಳ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಜೂಗೌಡ ಇದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುರಪುರ ವಿಧಾನಸಭೆ ಉಪಚುನಾವಣೆಗೆ ತಯಾರಿಯಲ್ಲಿದ್ದಾರೆ. ಹೀಗಾಗಿ ‘ಲೋಕ’ ಆಕಾಂಕ್ಷಿಗಳ ಪಟ್ಟಿಯಿಂದ ಅವರ ಹೆಸರು ಹೊರಬಂದಂತಾಗಿದೆ.
ಮೈತ್ರಿಯಿಂದ ಬಿಜೆಪಿಗೆ ಲಾಭ?
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಅಂತಹ ಹೇಳಿಕೊಳ್ಳುವ ಲಾಭವಿಲ್ಲದಿದ್ದರೂ, ಜೆಡಿಎಸ್‌ನ (JDS) ಮುಸ್ಲಿಮೇತರ ಮತಗಳು ಬಿಜೆಪಿಗೆ ಬರಬಹುದು. ಈಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ಗುಂಪುಗಾರಿಕೆಯಿರುವುದರಿಂದ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರವೊಂದರಲ್ಲೇ ಜೆಡಿಎಸ್ ಶಾಸಕಿ ಇದ್ದರೂ, ಇಡೀ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮೈತ್ರಿ ಬಿಜೆಪಿಗೆ ಸಹಕಾರಿಯಾಗಲಿದೆ.
ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಆದರೆ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಇದೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಮೈತ್ರಿಯಿಂದ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಬಿಜೆಪಿ ಈಗಾಗಲೇ ಎರಡು ಪಟ್ಟಿ ಪ್ರಕಟಿಸಿದ್ದು, ರಾಯಚೂರು ಅಭ್ಯರ್ಥಿ ಯಾರೆಂದು ಹೇಳಿಲ್ಲ. ಕಾಂಗ್ರೆಸ್ ಕೂಡ ಮೊದಲ ಪಟ್ಟಿಯಲ್ಲಿ ಕೆಲವೇ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಎರಡು ಪಕ್ಷಗಳಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಸದ್ಯದ ಕುತೂಹಲ.
ಜಾತಿವಾರು ಲೆಕ್ಕಾಚಾರ:
ಪರಿಶಿಷ್ಟ ಪಂಗಡ – 3,65,500
ಲಿಂಗಾಯತ – 3,20,500
ಪರಿಶಿಷ್ಟ ಜಾತಿ – 3,45,700
ಕುರುಬ ಸಮುದಾಯ – 2,50,250
ಮುಸ್ಲಿಂ – 2,90,500
ಗಂಗಾಮತಸ್ಥರು – 1,50,100
ಇತರೆ – 2,01,400