ತೀವ್ರ ಬಿಸಿಲು, ಬಿಸಿ ಗಾಳಿ- ತೆಲಂಗಾಣದಲ್ಲಿ ಮತದಾನದ ಸಮಯ ಬದಲಾವಣೆ

Public TV
2 Min Read
TELANGANA 1

ಹೈದರಾಬಾದ್: ಲೋಕಸಭಾ ಚುನಾವಣೆಯ (Loksabha Elections 2024) ಕಾವು ಒಂದೆಡೆಯಾದರೆ ಇನ್ನೊಂದೆಡೆ ಬಿಸಿಲಿನ ಕಾವು ಜೋರಾಗಿದೆ. ವಿಪರೀತ ಬಿಸಿಲು ಹಾಗೂ ಬಿಸಿ ಗಾಳಿಯ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಮತದಾನದ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಬಿಸಿಗಾಳಿ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಚುನಾವಣಾ ಆಯೋಗವು (ECI) ತೆಲಂಗಾಣದ (Telangana) ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ವಿಸ್ತರಿಸಿದೆ. ಈ ಪ್ರಕಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಇರುತ್ತದೆ.

ಏಳು ಹಂತದ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ರಾಜ್ಯದ ಎಲ್ಲಾ 17 ಲೋಕಸಭಾ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದೆ. ಮತದಾನದ ಸಮಯವು 12 ಲೋಕಸಭಾ ಕ್ಷೇತ್ರಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಅನ್ವಯಿಸುತ್ತದೆ. ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹಬೂಬ್‌ನಗರ, ನಾಗರ್‌ಕರ್ನೂಲ್ (SC), ನಲ್ಗೊಂಡ ಮತ್ತು ಭೋಂಗಿರ್ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.  ಇದನ್ನೂ ಓದಿ: ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

TELANGANA

ಪರಿಷ್ಕೃತ ಮತದಾನದ ಸಮಯವು ಲೋಕಸಭಾ ಕ್ಷೇತ್ರಗಳೊಳಗಿನ ನಿರ್ದಿಷ್ಟ ವಿಧಾನಸಭಾ ವಿಭಾಗಗಳನ್ನು ಸಹ ಒಳಗೊಳ್ಳುತ್ತದೆ. ಆದಿಲಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳು, ಪೆದ್ದಪಲ್ಲೆ ಕ್ಷೇತ್ರದ 3 ಕ್ಷೇತ್ರಗಳು, ವಾರಂಗಲ್ (SC) ಕ್ಷೇತ್ರದಲ್ಲಿ 6, ಮಹಬೂಬಾಬಾದ್ (ST) ಕ್ಷೇತ್ರದಲ್ಲಿ 3 ಮತ್ತು ಖಮ್ಮಂ ಲೋಕಸಭಾ ಕ್ಷೇತ್ರದ 5 ಕ್ಷೇತ್ರಗಳು ನವೀಕರಿಸಿದ ಸಮಯಲ್ಲಿ ಮತದಾನ ಮಾಡಬಹುದಾಗಿದೆ.

ರಾಜ್ಯದಲ್ಲಿ ಬಿಸಿ ಅಲೆ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಮತದಾರರ ಮತದಾನದ ಮೇಲೆ ಅದರ ಪರಿಣಾಮದ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿ ಅಭ್ಯರ್ಥಿಗಳಿಂದ ಪಡೆದ ಪ್ರಾತಿನಿಧ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿಯ ಕೋರಿಕೆಯ ಮೇರೆಗೆ ಸಮಯವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯವು ಆದಿಲಾಬಾದ್, ಪೆದ್ದಪಲ್ಲೆ, ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹೆಬೂಬ್‌ನಗರ, ನಾಗರ್‌ಕರ್ನೂಲ್, ನಲ್ಗೊಂಡ, ಭೋಂಗಿರ್, ವಾರಂಗಲ್, ಮಹಬೂಬಾಬಾದ್ ಮತ್ತು ಖಮ್ಮಮ್ ಎಂಬ 17 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

Share This Article