– ಕಳೆದ ಚುನಾವಣೆ ಸೂತ್ರವನ್ನೇ ಅನುಸರಿಸಿದ ಸ್ಟಾಲಿನ್ ಪಕ್ಷ
– ‘ಕೈ’ ಪಾಲಾಯ್ತು ಪುದುಚೇರಿ
ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M.K.Stalin) ಅವರ ಪಕ್ಷವಾದ ಡಿಎಂಕೆ ತನ್ನ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.
ಡಿಎಂಕೆ (DMK) ತನ್ನ ‘ಇಂಡಿಯಾ’ ಬ್ಲಾಕ್ (INDIA Bloc) ಮಿತ್ರ ಪಕ್ಷಕ್ಕೆ ತಮಿಳುನಾಡಿನಲ್ಲಿ ಒಂಬತ್ತು ಸ್ಥಾನಗಳನ್ನು ಮತ್ತು ಪುದುಚೇರಿಯನ್ನು ಬಿಟ್ಟುಕೊಟ್ಟಿದೆ. ಆ ಮೂಲಕ ಡಿಎಂಕೆ 2019 ರ ಸೂತ್ರವನ್ನೇ ಅನುಸರಿಸಿದೆ. ಕಾಂಗ್ರೆಸ್ 2019 ರಲ್ಲಿ ಸ್ಪರ್ಧಿಸಿದ್ದ ಹತ್ತು ಸ್ಥಾನಗಳಲ್ಲಿ ಒಂಬತ್ತನ್ನು ಗೆದ್ದಿತ್ತು. ತಮಿಳುನಾಡು 39 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸಿದ ಟಿಡಿಪಿ, ಜೆಎಸ್‌ಪಿ – ಆಂಧ್ರದ ಲೋಕಸಭಾ, ವಿಧಾನಸಭಾ ಚುನಾವಣೆಗೆ ಮೈತ್ರಿ ಸ್ಪರ್ಧೆ
ಎಂಕೆ ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಕೆ.ಸೆಲ್ವಪೆರುಂತಗೈ ಅವರು ಕಾಂಗ್ರೆಸ್ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಅಜೋಯ್ ಕುಮಾರ್ ಅವರ ಸಮ್ಮುಖದಲ್ಲಿ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟವು ಎಲ್ಲಾ 40 ಸ್ಥಾನಗಳನ್ನು ಗೆಲ್ಲಲಿದೆ ಎಂದು ವೇಣುಗೋಪಾಲ್ ಪ್ರತಿಪಾದಿಸಿದರು. ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಬಾಂಧವ್ಯ ಅಖಂಡವಾಗಿದೆ. ಒಗ್ಗಟ್ಟಿನಿಂದ ಹೋರಾಡಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ – ಇಂಡಿಯಾ ಒಕ್ಕೂಟ ಸೇರುವ ವದಂತಿಗೆ ಮಾಯಾವತಿ ಸ್ಪಷ್ಟನೆ
ತಮಿಳುನಾಡಿನ ಆಡಳಿತ ಪಕ್ಷವು ತನ್ನ 2019 ರ ಮಾದರಿಯನ್ನು ಅನುಸರಿಸುತ್ತಿದೆ. ಅದರ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಶುಕ್ರವಾರ ಎರಡು ಮೀಸಲು ಕ್ಷೇತ್ರಗಳನ್ನು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ವೈಕೋ ನೇತೃತ್ವದ ಎಂಡಿಎಂಕೆಗೆ ಹಂಚಿಕೆ ಮಾಡಿತು. ವಿಸಿಕೆ ಪ್ರಸ್ತುತ ಲೋಕಸಭೆಯಲ್ಲಿ ಪ್ರತಿನಿಧಿಸುವ ಎರಡು ಸ್ಥಾನಗಳಾದ ಚಿದಂಬರಂ ಮತ್ತು ವಿಲ್ಲುಪುರಂನಿಂದ ಸ್ಪರ್ಧಿಸಲಿದೆ.