ಕಲ್ಪತರು ‘ಲೋಕ’ದ ನಾಡಲ್ಲಿ ರಾಜಕೀಯ ವರ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕ ಬಹಿರಂಗ

Public TV
2 Min Read
tumakuru

ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರದ ಮತದಾನದ ಹಂತ ಪೂರ್ಣಗೊಂಡಿದ್ದು, ಮತ ಏಣಿಕೆಗೆ ದಿನ ಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಿದ್ದು, ಎಲ್ಲೆಲ್ಲಿ ಮುನ್ನಡೆ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಿವೆ.

ಮೊಮ್ಮಗನಿಗಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಲಸೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗೆಲುತ್ತಾರಾ? ಇಲ್ಲವೇ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ಅವರ ಅತೃಪ್ತಿಗೆ ಒಳಗಾಗುತ್ತಾರಾ? ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಜಿ.ಎಸ್.ಬಸವರಾಜು ಗೆದ್ದು ಬರುತ್ತರಾ ಎನ್ನುವ ಪ್ರಶ್ನೆಗಳು ಶುರುವಾಗಿವೆ.

hdd

ದೋಸ್ತಿ ಲೆಕ್ಕ: ತುಮಕೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಚ್.ಡಿ.ದೇವೇಗೌಡ ಅವರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ತುಮಕೂರು ಗ್ರಾಮಾಂತರ, ತುರುವೇಕೆರೆ ಹಾಗೂ ಕೊರಟಗೆರೆ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುನ್ನಡೆ ಸಿಗಲಿದೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ತುಮಕೂರು ನಗರದಲ್ಲಿ 5 ಸಾವಿರ, ತುಮಕೂರು ಗ್ರಾಮಾಂತರ 20 ಸಾವಿರ, ಚಿಕ್ಕನಾಯಕನಹಳ್ಳಿ, 10 ಸಾವಿರ, ತಿಪಟೂರು 15 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 20 ಸಾವಿರ, ಗುಬ್ಬಿ 10 ಸಾವಿರ, ಮಧುಗಿರಿ 15 ಸಾವಿರ ಮತಗಳ ಮುನ್ನಡೆ ಸಿಗಲಿದೆ. ಈ ಮೂಲಕ ಎಚ್.ಡಿ.ದೇವೇಗೌಡ ಅವರು 1.10 ಲಕ್ಷ ಮತಗಳ ಲೀಡ್ ನಿಂದ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

tmk basavaraju 1

ಬಿಜೆಪಿ ಲೆಕ್ಕ: ಕಮಲ ಪಡೆಯ ಲೆಕ್ಕಾಚಾರದ ಪ್ರಕಾರ ತುಮಕೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮುನ್ನಡೆ ಸಿಗಲಿದೆ. ಅಷ್ಟೇ ಅಲ್ಲದೆ ತಿಪಟೂರು, ತುರುವೇಕೆರೆ, ಕೊರಟಗೆರೆ ಹಾಗೂ ಗುಬ್ಬಿ ಕ್ಷೇತ್ರಗಳ ಮತದಾರರ ಮೇಲೆ ಭಾರೀ ನಿರೀಕ್ಷೆ ಇಟ್ಟಿರುವುದನ್ನು ಬಿಜೆಪಿ ಸಮೀಕ್ಷೆಯು ತಿಳಿಸುತ್ತದೆ.

ಕೇಸರಿ ನಾಯಕರ ಸಮೀಕ್ಷೆ ಪ್ರಕಾರ ತುಮಕೂರು ನಗರ 10 ಸಾವಿರ, ತುಮಕೂರು ಗ್ರಾಮಾಂತರ 5 ಸಾವಿರ, ಚಿಕ್ಕನಾಯಕನಹಳ್ಳಿ 5 ಸಾವಿರ, ತಿಪಟೂರು 30 ಸಾವಿರ, ತುರುವೇಕೆರೆ 20 ಸಾವಿರ, ಕೊರಟಗೆರೆ 15 ಸಾವಿರ, ಗುಬ್ಬಿ 15 ಸಾವಿರ, ಮಧುಗಿರಿ 10 ಸಾವಿರ ಮತಗಳ ಲೀಡ್ ಸಿಗಲಿದೆ. ಈ ಮೂಲಕ ಜಿ.ಎಸ್.ಬಸವರಾಜು ಅವರು 1.10 ಲಕ್ಷ ಮತಗಳ ಅಂತರದಿಂದ ಜಯಶೀಲರಾಗಲಿದ್ದಾರೆ ಎಂದು ಬಿಜೆಪಿ ವರದಿ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *