– ಸಮ್ಮಿಶ್ರ ಸರ್ಕಾರಕ್ಕೆ ಬಿಎಸ್‍ವೈ ಮತ್ತೆ ಗಡುವು ನೀಡಿದ್ದಾರೆ
– ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ
– ಮತ್ತೆ ರಾಜಕೀಯ ನಿವೃತ್ತಿ ಮಾತನಾಡಿದ ಸಚಿವ ರೇವಣ್ಣ
ಶಿವಮೊಗ್ಗ: ಅಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೆಣ್ಮಕ್ಕಳ ಧ್ವನಿಯ ಕರೆ ಮೊಬೈಲ್‍ಗೆ ಬರುತ್ತದೆ. ಜೈಲಿಗೆ ಹೋಗಿ ಬಂದವರ ಮಗನಾ ರಾಘವೇಂದ್ರ ಅಂದ್ರೆ ಎಂದು ಯಾರೋ ಕೇಳಿದ್ರಂತೆ. ಆ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಸಾಗರದ ನೆಹರು ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋಗಿದ್ದು, ಡೈರಿ ವಿಚಾರ ದೊಡ್ಡದು ಮಾಡಬೇಡಿ ಎಂದು ಮನವಿ ಮಾಡೋದಕ್ಕೆ. ನೀರಾವರಿ ಯೋಜನೆ ಮಾತುಕತೆ ಅಲ್ಲ ಎಂದು ದೂರಿದರು.
Advertisement
Advertisement
ಸಮ್ಮಿಶ್ರ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರು ಮತ್ತೆ ಗಡುವು ನೀಡಿದ್ದಾರೆ. ಅವರು ಮೇ 23ಕ್ಕೆ ಮುಖ್ಯಮಂತ್ರಿ ಆಗುತ್ತಾರಂತೆ. ಈ ಮೂಲಕ ಆಡಳಿತ ಪಕ್ಷಗಳ ಒಬ್ಬೊಬ್ಬ ಶಾಸಕರಿಗೆ 20ರಿಂದ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬಂತು? ಗುರುಮಿಠ್ಕಲ್‍ನಲ್ಲಿ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದರು ಎಂದು ವಾಗ್ದಾಳಿ ನಡೆಸಿದರು.
Advertisement
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ದುಡಿಮೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸಿ. ಪ್ರಧಾನಿ ಮೋದಿ ಅವರು ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ? ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿ, ಈಡೇರಿಸಲಿಲ್ಲ. ಜನಧನ್ ಖಾತೆಗೆ ನರೇಗಾ ಯೋಜನೆಯ ಎರಡು ಸಾವಿರ ರೂ. ಜಮೆ ಆಗುತ್ತಿದೆ. ಆ ಹಣವನ್ನು ಕೂಡ ಈಗ ಕಡಿತಗೊಳಿಸುತ್ತಿದ್ದು, ಯಾವ ಉದ್ಯಮಿದಾರರಿಗೆ ನೀಡುತ್ತಿದ್ದಾರೋ ಏನೋ? ಎಂದು ವ್ಯಂಗ್ಯವಾಡಿದರು.
Advertisement
ಸಾಗರದಲ್ಲಿ ಕೆಲವು ಯುವಕರು ಮೋದಿ ಮೋದಿ ಅಂತ ಘೋಷಣೆ ಕೂಗುತ್ತಿದ್ದಾರೆ. ಆ ಯುವಕರಿಗೆ ಏನು ಹುಚ್ಚು ಹಿಡಿದಿದೆಯಾ ಅಂದ್ಕೊಂಡೆ. ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನ ಕಣ್ಣೀರನ್ನು ಪ್ರಶ್ನೆ ಮಾಡಿದ್ದಾರೆ. ನಮ್ಮ ಸರ್ಕಾರ ಮಜಬೂರ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಜಬುತ್ ಸರ್ಕಾರ ಎನ್ನುತ್ತಾರೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಿಮ್ಮದೊಂದೇ ಫೋಟೊ ಹಾಕಿಕೊಂಡಿದ್ದೀರಿ. ಈ ಯೋಜನೆಗೆ ರಾಜ್ಯ ಸರ್ಕಾರ 900 ಕೋಟಿ ನೀಡುತ್ತದೆ. ಕೇಂದ್ರ ನೀಡುವುದು ಕೇವಲ 300 ಕೋಟಿ ರೂ. ಮಾತ್ರ. ಆದರೂ ನೀವು ರಾಜ್ಯ ಸರ್ಕಾರ ಮಜಬುರ್ ಸರ್ಕಾರ ಅಂತೀರಾ ಮೋದಿ ಅವರೇ ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಚರ್ಚೆ ಮಾಡಲ್ಲ. ಹಸಿರು ಶಾಲು ಹೊದ್ದು ನಿಮಗೆ ಟೋಪಿ ಹಾಕಿದ್ದು ಗೊತ್ತಿದೆ. ಹೀಗಾಗಿ ನಾನು ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ಸಮಾವೇಶದ ಮಧ್ಯೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆಗಮಿಸಿದರು. ಈ ವೇಳೆ ಸಮಾವೇಶದಲ್ಲಿ ಸೇರಿದ್ದ ಜನರು ಘೋಷಣೆ ಕೂಗಿದರು. ಎಚ್.ಡಿ.ರೇವಣ್ಣ ಮುಹೂರ್ತ ನೋಡಿ ಮೊದಲ ಬಾರಿಗೆ ಸಾಗರಕ್ಕೆ ಬಂದಿದ್ದಾರೆ ಎಂದ ಮಧು ಬಂಗಾರಪ್ಪ ಸಮಾವೇಶದಲ್ಲಿ ನಗೆ ಅಲೆ ಎಬ್ಬಿಸಿದರು. ತಕ್ಷಣವೇ ಕಾಗೋಡು ತಿಮ್ಮಪ್ಪ ಅವರು ಸಚಿವರನ್ನು ಕರೆದುಕೊಂಡು ಬಂದು ಮೈಕ್ ಮುಂದೆ ನಿಲ್ಲಿಸಿದರು.
ಸಚಿವ ಎಚ್.ಡಿ.ರೇವಣ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರ ಕಾಲ ಮುಗಿದಿದೆ. ಮುಖ್ಯಮಂತ್ರಿ ಆಗಲ್ಲ. ಸಿಎಂ ಕನಸು ಇದ್ದರೆ ಮರೆತು ಬಿಡಲಿ. ಹಾಸನ, ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿಯೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಯಗಳಿಸುತ್ತಾರೆ. ಪ್ರಧಾನಿ ಮೋದಿ ಅವರು ಎಲ್ಲಾ ರೈತರ ಖಾತೆಗೆ ಹಣ ಹಾಕಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಗೋಪಾಲಕೃಷ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಏನು ಮಾಡಿಲ್ಲ. ಹೀಗಾಗಿ ಪ್ರಧಾನಿ ಮೋದಿ ಎಂದು ಹೇಳುತ್ತಾರೆ. ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದರೆ ನಿಮಗೆ ಬಸ್ ಸ್ಟಾಂಡ್ ಗತಿಯಾಗುತ್ತದೆ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ತಿಳಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಷ್ಟು ಆಸ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ರಾಘವೇಂದ್ರ ಅವರ ಆಸ್ತಿ ಹೆಚ್ಚಾಗಿದ್ದು ಹೇಗೆ? ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿಯವರೇ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದರು.