ಪ್ರಜ್ಞಾಸಿಂಗ್ ಬಿಜೆಪಿಯ ರತ್ನ : ಮಾಯಾವತಿ

Public TV
2 Min Read
Mayawati BJP Pragya Thakur

– ಚುನಾವಣಾ ಆಯೋಗದ ವಿರುದ್ಧ ಕಿಡಿ

ಲಕ್ನೋ: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಬಿಜೆಪಿಯ ರತ್ನ ಎಂದು ಕರೆದು ವ್ಯಂಗ್ಯವಾಡಿದ್ದಾರೆ.

ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಯಾಕೆ ಕ್ರಮಕೈಗೊಳ್ಳಲಿಲ್ಲ ಎಂದು ಮಾಯಾವತಿ ಅವರು ಟ್ವೀಟ್ ಮೂಲಕ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದಾಗಿ ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ಚುನಾವಣಾ ಆಯೋಗವು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದೆ.

Mayawati 3

ಟ್ವೀಟ್‍ನಲ್ಲಿ ಏನಿದೆ?:
ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟ ಪ್ರಕರಣ ಆರೋಪಿ ಹಾಗೂ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಅವರು, ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಈಗ ಧರ್ಮಯುದ್ಧ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಿರಂತರವಾಗಿ ಬಹಿರಂಗವಾಗುತ್ತಿರುವ ಆರ್‍ಎಸ್‍ಎಸ್ ಹಾಗೂ ಬಿಜೆಪಿಯ ಮುಖಗಳಿವು. ಬಿಜೆಪಿಯ ರತ್ನ ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ಚುನಾವಣಾ ಆಯೋಗವು ಕೇವಲ ನೋಟಿಸ್ ನೀಡುತ್ತಿದೆ. ನಾಮಪತ್ರವನ್ನು ಯಾಕೆ ರದ್ದು ಮಾಡುತ್ತಿಲ್ಲ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಸಾಧ್ವಿ ಪ್ರಜ್ಞಾಸಿಂಗ್ 49 ವರ್ಷದವರಾಗಿದ್ದು, ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಚುನಾವಣಾ ಆಯೋಗವು ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿತ್ತು. ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೋರುವುದಾಗಿ ತಿಳಿಸಿದ್ದರು.

Sadhvi Pragya

ಹೇಮಂತ್ ಕರ್ಕರೆ ಅವರ ಸಾವಿನ ಕುರಿತಾದ ಹೇಳಿಕೆ ಬೆನ್ನಲ್ಲೇ ಬಾಬರಿ ಮಸೀದಿ ಬಗ್ಗೆ ಸಾಧ್ವಿ ಪ್ರಜ್ಞಾಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಬರಿ ಮಸೀದಿ ಧ್ವಂಸಗೊಳಿಸಿದ್ದಕ್ಕೆ ನಾವು ಯಾಕೆ ವಿಷಾದ ವ್ಯಕ್ತಪಡಿಸಬೇಕು? ನಮಗೆ ಆ ಬಗ್ಗೆ ಹೆಮ್ಮೆ ಇದೆ. ಈ ಸುವರ್ಣ ಅವಕಾಶ ನೀಡಿದ್ದಕ್ಕೆ ದೇವರಿಗೆ ನಾನು ವಂದನೆ ಸಲ್ಲಿಸುತ್ತೇನೆ. ಆ ಘಟನೆ ದೇಶದ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ. ಬಾಬ್ರಿ ಮಸೀದಿಯ ತುದಿಗೆ ಏರಿ ಮಸೀದಿ ಕೆಡವಲು ನಾನೂ ನೆರವಾಗಿದ್ದೆ ಎಂದಿದ್ದರು. ಈ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಈ ಮೂಲಕ ಚುನಾವಣಾ ಆಯೋಗವು ಒಟ್ಟು ಎರಡು ಬಾರಿ ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ನೋಟಿಸ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *