ಹುಬ್ಬಳ್ಳಿ: ನಾವು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ. ನಾವು ಕೇಳಿದಂತೆ ಕಾಂಗ್ರೆಸ್‍ನವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರು ಹೇಳಿ ವೋಟ್ ಕೇಳಲಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 104 ಕ್ಷೇತ್ರಗಳಲ್ಲಿ ಗೆದ್ದರೂ ನಾವು ವಿರೋಧ ಪಕ್ಷವಾಗಿ ಉಳಿದಿದ್ದೇವೆ. ಕೇವಲ 37 ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ. ಹೀಗಾಗಿ ಎಲ್ಲ ಕಡೆ ನಮ್ಮ ಅಲೆ ಇದೆ. ಸ್ವಲ್ಪ ಆ ಕಡೆ ಈಕಡೆ ಎನ್ನುವವರ ಕೈ ಕಾಲು ಕಟ್ಟಿ ನಮ್ಮ ಸಾಧನೆ ಹೇಳಿ ಮತ ಹಾಕಿಸಿ ಎಂದರು.
ಮಾಧ್ಯಮದವರ ಮೇಲೆ ಹೆಲ್ಲೆ ಮಾಡಿದರೆ ನಾನು ಜವಾಬ್ದಾರನಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಮಾತನ್ನು ಸಿಎಂ ಮೊದಲು ಹಿಂಪಡೆದು ಮಾಧ್ಯಮದವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಪ್ಪ, ಮಕ್ಕಳ ಕಾಟ ಆಯಿತು. ಬಳಿಕ ಸೊಸೆಯಂದಿರ ಕಾಟವೂ ಆಯಿತು. ಈಗ ಮೊಮ್ಮಕ್ಕಳ ಕಾಟ ನಮಗೆ ಶುರುವಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದ ವಿರುದ್ಧ ಕಿಡಿಕಾರಿದರು.