ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್‍ನಿಂದ ಹೊಡಿಬೇಕಾ? ಅಥವಾ ಗ್ಯಾಸ್‍ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪ್ರಧಾನಿ ಮೋದಿ ಅವರ ವೈಫಲ್ಯದ ಬಗ್ಗೆ ಮಾತನಾಡಿದವರು ದೇಶದ್ರೋಹಿಗಳಾಗುತ್ತಾರೆ. ಮೋದಿ ಅವರು 2014ರಲ್ಲಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ವಿದೇಶದಲ್ಲಿ ಇರುವ ಕಪ್ಪು ಹಣವನ್ನು ತರುವುದಾಗಿ ಹೇಳಿದ್ದರು. ಇಂತಹ ಅನೇಕ ಭರವಸೆಗಳನ್ನು ಮೋದಿ ಅವರು ಮರೆತಿದ್ದಾರೆ. ಚುನಾವಣೆ ಬಳಿಕ ಬಿಎಸ್‍ಎನ್‍ಎಲ್ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಇದರಿಂದ ಅನೇಕರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದರು.
Advertisement
ನರೇಂದ್ರ ಮೋದಿ ಅವರು ಜಿಯೋ ಕಂಪನಿಯ ರಾಯಬಾರಿಯಾಗಿದ್ದಾರೆ. ನಾನೇ ಅಂತರ್ಜಾಲದಲ್ಲಿ ಕ್ರಾಂತಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೂ ಮೊದಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು, ದೂರವಾಣಿ ಸಂಪರ್ಕದಲ್ಲಿ ಕ್ರಾಂತಿ ಮಾಡಿದ್ದರು. ಎಲ್ಲವನ್ನೂ ನಾನೇ ಮಾಡಿದೆ ಅಂತ ಹೇಳುವುದು ಸರಿಯಲ್ಲ ಎಂದರು.
Advertisement
ಎಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ತುಮಕೂರು ಕ್ಷೇತ್ರದ ಜನತೆ ಮಹತ್ವದ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ಈ ಮೂಲಕ ಎಚ್.ಡಿ.ದೇವೇಗೌಡ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಆಯ್ಕೆ ಮಾಡಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.