ಕಲಬುರಗಿ: ಬಿಜೆಪಿಗೆ ಮಕ್ಕಳು ಹುಟ್ಟಿಸುವ ಶಕ್ತಿಯಿಲ್ಲ. ಅದಕ್ಕೆ ಕಾಂಗ್ರೆಸ್‍ಗೆ ಹುಟ್ಟಿದ ಮಗುವನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಅವರು, ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ ಆಗಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದದ ಅವರು, ಈ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಅವರದ್ದಲ್ಲ. ಇದು ಕರ್ನಾಟಕ ರಾಜ್ಯದ ಅಭಿವೃದ್ಧಿಯ ಚುನಾವಣೆಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಬದ್ಧ ವೈರಿಗಳಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿವೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಬದ್ಧ ವೈರಿಗಳಾದ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್‍ಪಿ) ಒಂದಾಗಿವೆ. ಹೀಗೆ ಅನೇಕ ಪಕ್ಷಗಳು ಒಂದಾಗಿದ್ದು, ಬಿಜೆಪಿಯನ್ನು ಸೋಲಿಸಲಿವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಆರ್ ಎಸ್‍ಎಸ್ ನಾಮಕಾವಸ್ತೆ ಎನ್ನುವಂತೆ ಇಟ್ಟುಕೊಂಡಿದೆ. ಮುಸಲ್ಮಾನರು ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸ ಹೊಡೆದರೆ ಟಿಕೆಟ್ ಕೊಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು 40 ವರ್ಷದಿಂದ ಆರ್ ಎಸ್‍ಎಸ್ ಕಚೇರಿಯ ಕಸ ಗುಡಿಸಿದರೂ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಲಿಲ್ಲ ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕು ಅಂತ ಹೇಳುತ್ತಾರೆ. ಬಲಿಷ್ಠ ಪ್ರಧಾನಿ ತಗೆದುಕೊಂಡು ಕುಸ್ತಿ ಆಡಬೇಕಾ? ಮಾಜಿ ಪ್ರಧಾನಿ ನರೇಂದ್ರ ಮೋದಿ ನಿಶಕ್ತರಾಗಿದ್ದರೂ 400 ರೂ.ಗೆ ಅಡುಗೆ ಗ್ಯಾಸ್ ಸಿಲಿಂಡರ್ ಕೊಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ಆಡಳಿತ ಅವಧಿಯಲ್ಲಿ 12 ಸರ್ಜಿಕಲ್ ಸ್ಟ್ರೈಕ್ ಆಗಿವೆ. ಅವರು ಮಾಡಿರುವ ಕೆಲಸವನ್ನು ವಿವರಿಸಿ ಹೇಳುವುದಕ್ಕೆ ಸಮಯ ಸಿಗುತ್ತಿಲ್ಲ ಎಂದು ವ್ಯಂಗ್ಯದ ಮಾತುಗಳನ್ನಾಡಿದರು.