ಬೆಂಗಳೂರು: ಲೋಕಸಭಾ ಚುನಾವಣೆಯ ಭದ್ರತೆಗಾಗಿ ಆಗಮಿಸಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಯೋಧರಿಗೆ ಹೂವಿನ ಮಳೆ ಸುರಿಸಿ ಬೆಂಗಳೂರಿನಲ್ಲಿ ಸ್ವಾಗತ ಕೋರಲಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸಿ ಯಾವುದೇ ಭಯವಿಲ್ಲದೇ ಮತ ಚಲಾಯಿಸುವಂತೆ ಪ್ರೇರಣೆ ನೀಡಲು ಯೋಧರು ನಗರದಲ್ಲಿ ಶಿಸ್ತಿನಿಂದ ಮಾರ್ಚ್ ನಡೆಸಿದ್ದರು. ಈ ವೇಳೆ ಮನೆ ಮೇಲೆ ನಿಂತ ಸಾರ್ವಜನಿಕರು ಯೋಧರು ಸಾಗುತ್ತಿದ್ದ ವೇಳೆ ಹೂ ಸುರಿಸಿ ಸ್ವಾಗತ ಮಾಡಿದ್ದಾರೆ. ಆ ಮೂಲಕ ಯೋಧರ ದಿನವನ್ನು ಸ್ಮರಣಿಯವನ್ನಾಗಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಶನಿವಾರ ಸುಮಾರು 8 ಕಿಮೀ ದೂರ ರಸ್ತೆಯಲ್ಲಿ ಸಾಗಿದ್ದರು. ಸುಮಾರು 250 ಸಿಐಎಸ್‍ಎಫ್ ಯೋಧರು ಕೆಆರ್ ಪುರಂ ತಾಲೂಕು ಕಚೇರಿ ಬಳಿಯಿಂದ ದೇವಸಂದ್ರ ಮುಖ್ಯ ರಸ್ತೆ, ಮಸೀದಿ ರಸ್ತೆ, ಅಯ್ಯಪ್ಪ ನಗರ, ಬಟ್ಟರಹಳ್ಳಿ ಮಾರ್ಗವಾಗಿ ಸಾಗಿ ಟಿಸಿ ಪಾಳ್ಯ ಚರ್ಚ್ ರೋಡ್ ವರೆಗೂ ನಡೆದಿದ್ದರು.
ಈ ವೇಳೆ ಸ್ಥಳೀಯ ಯುವಕ ಶಣ್ಮುಗ ಮಾತನಾಡಿ, ನಾವು ಸೈನಿಕರ ಮೇಲಿನ ಪ್ರೀತಿ, ಗೌರವವನ್ನು ಈ ಮೂಲಕ ತೋರಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.