– ಚುನಾವಣೆ ನಂತ್ರ ಮೈತ್ರಿ ಸರ್ಕಾರ ಬೀಳುತ್ತೆ
ಮೈಸೂರು: ಸಂಸದ, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲುವಿನ ಮೇಲೆ ನನ್ನ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಪ್ರತಾಪ್ ಸಿಂಹ ಅವರ ಪರ ಪ್ರಚಾರ ವೇಳೆ ಮಾತನಾಡಿದ ಅವರು, ವೀರಶೈವ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುವ ಪಿತೂರಿ ನಡೆಯುತ್ತಿದೆ. ಯಾವುದಾದರು ಕಾರಣಕ್ಕೆ ಪ್ರತಾಪ್ ಸಿಂಹ ಅವರಿಗೆ ಹಿನ್ನಡೆಯಾದರೆ ಅದು ನನ್ನ ಸೋಲಾಗುತ್ತದೆ. ಹೀಗಾಗಿ ಎಲ್ಲರೂ ಯೋಚಿಸಿ ಮತ ಹಾಕಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.
ನಾವು ಸೋತರೆ ಸರ್ಕಾರ ಉಳಿಯುತ್ತಾ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಂಟಾದ ಸೋಲನ್ನು ಸಿದ್ದರಾಮಯ್ಯ ಅವರು ತಮ್ಮ ಜೀವನದಲ್ಲಿ ಮರೆಯುದಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ರಾಜಕೀಯ ಆಟವನ್ನು ಮಾಜಿ ಸಿಎಂ ನೋಡಿದ್ದಾರೆ. ಈಗಾಗಲೇ 20 ಜನ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಬಹಿರಂಗ ಹೇಳಿಕೆ ಕೂಡ ನೀಡಿದ್ದಾರೆ. ಇದನ್ನು ಗಮನಿಸಿದ ಸಿದ್ದರಾಮಯ್ಯ ಹೀಗೆ ಹೇಳಿರಬಹುದು ಎಂದರು.
ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಚುನಾವಣೆ ನಂತರ ಮೈತ್ರಿ ಪಕ್ಷಗಳ ಹೊಡೆದಾಟ ಜಾಸ್ತಿಯಾಗುತ್ತದೆ. ಸರ್ಕಾರ ಬೀಳುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.