ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ (Lok Sabha Election Results 2024) ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ (Adichunchana Giri mutt) ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಠದ ಆವರಣದಲ್ಲಿರುವ ಗಂಗಾಧರೇಶ್ವರ ದೇವಾಲಯದಲ್ಲಿ ಡಾ.ನಿರ್ಮಲಾನಂದ ಶ್ರೀಗಳ (Nirmalananda Swamiji) ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ವಿಶೇಷ ಮಂಗಳಾರತಿ ಮಾಡಿಸಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಆರಂಭಿಕ ಮುನ್ನಡೆಯಲ್ಲಿದ್ದೇವೆ. ಕೊನೆ ಹಂತದವರೆಗೆ ಇದು ಹೀಗೆಯೇ ಇರಲಿದೆ. ದೇಶದಲ್ಲಿ ಎನ್‍ಡಿಎ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸವಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಸೀಟ್‍ಗಳನ್ನು ಎನ್‍ಡಿಎ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಉತ್ಸಾಹದಿಂದಲೇ ಇದ್ದೇನೆ. ಮಂಡ್ಯ ಕ್ಷೇತ್ರಕ್ಕೆ ಸೇವೆ ಮಾಡಲು ಅವಕಾಶ ಸಿಗುವುದರಲ್ಲಿ ಯಾವ ಅನುಮಾನ ಇಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.