ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ (Loksabha Election Result 024) ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ (G Kumar Naik) ಭರ್ಜರಿ ಜಯಗಳಿಸಿದ್ದಾರೆ.
ಜಿ. ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯ್ಕ್ ವಿರುದ್ಧ 79,781 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕುಮಾರ್ ನಾಯ್ಕ್ ಅವರು 6,70,966 ಮತಗಳನ್ನು ಪಡೆದರೆ, ರಾಜಾ ಅಮರೇಶ್ವರ್ ನಾಯ್ಕ್ (Raja Amareshwar Naik) ಅವರು 5,91,185 ಮತಗಳನ್ನು ಗಳಿಸಿದ್ದಾರೆ.
ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ್ ನಾಯ್ಕ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭಾರೀ ಗೆಲುವು ಕಂಡಿದ್ದರು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಆದರೆ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ
ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಕುಮಾರ್ ನಾಯ್ಕ್, ದೇಶದಲ್ಲಿನ ಬಿಜೆಪಿ ವಿರೋಧಿ ಅಲೆ ನನ್ನ ಗೆಲುವಿಗೆ ಕಾರಣವಾಗಿದೆ. ಬಿಜೆಪಿಯವರು ಪ್ರಚಾರದ ಭರಾಟೆಯಲ್ಲಿ ತಮ್ಮ ವಿರೋಧಿ ಅಲೆಯನ್ನು ಕಡೆಗಣಿಸಿದ್ದರು. 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರ ನಿರೀಕ್ಷೆ ಸುಳ್ಳಾಗಿದೆ. ಮೋದಿ ಸರ್ಕಾರದ ವಿರುದ್ಧದ ಅಸಮಧಾನ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ರಾಯಚೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ರಾಜಕೀಯ ರಂಗದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ರಾಯಚೂರು ನನಗೆ ಹೊಸದಲ್ಲಾ ಇದು ನನ್ನ ಕರ್ಮಭೂಮಿ ಹೀಗಾಗಿ ಜನ ಕೈ ಹಿಡಿದಿದ್ದಾರೆ.ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.