ಕೊಹಿಮಾ: 20 ವರ್ಷಗಳ ನಂತರ ನಾಗಾಲ್ಯಾಂಡ್‍ನ (Nagaland) ಏಕೈಕ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ (Congress) ಗೆದ್ದು ಇತಿಹಾಸ ನಿರ್ಮಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಎಸ್ ಸುಪೊಂಗ್‌ಮೆರೆನ್ ಜಮೀರ್ ಅವರು ಪ್ರತಿಸ್ಪರ್ಧಿ ಎನ್‍ಡಿಪಿಪಿಯ ಚುಂಬೆನ್ ಮುರ್ರಿ ಅವರನ್ನು 50,984 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜಮೀರ್ 4,01,951 ಮತಗಳನ್ನು ಪಡೆದರೆ, ಮರ್ರಿ 3,50,967 ಮತಗಳನ್ನು ಮತ್ತು ಸ್ವತಂತ್ರ ಅಭ್ಯರ್ಥಿ ಹಯಿತುಂಗ್ ತುಂಗೋ ಲೋಥಾ 6,232 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2014 ರಿಂದ ರಾಜ್ಯ ವಿಧಾನಸಭೆಯಲ್ಲಿ ಯಾವುದೇ ಶಾಸಕರನ್ನು ಹೊಂದಿರದ ಕಾಂಗ್ರೆಸ್‍ಗೆ ಇದು ಮೊದಲ ಪ್ರಮುಖ ಗೆಲುವಾಗಿದೆ. ಪಕ್ಷವು ಕೊನೆಯ ಬಾರಿಗೆ 1999 ರಲ್ಲಿ ಲೋಕಸಭೆ ಸ್ಥಾನವನ್ನು ಗೆದ್ದಿತ್ತು.
2019ರ ಚುನಾವಣೆಯಲ್ಲಿ ಆಡಳಿತಾರೂಢ ಎನ್‍ಡಿಪಿಪಿ ಅಭ್ಯರ್ಥಿ ತೊಹೆಖೋ ಯೆಪ್ಟೋಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ ಎಲ್ ಚಿಶಿ ವಿರುದ್ಧ 13,000 ಮತಗಳಿಂದ ಗೆದ್ದಿದ್ದರು.