ಮಂಡ್ಯ: ಹಾಸನ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ ಎಂಬ ಮಾಹಿತಿ ಬೆನ್ನಲ್ಲೇ, ಇತ್ತ ಜೆಡಿಎಸ್ ಭದ್ರಕೋಟೆ ಮಂಡ್ಯದಿಂದ ದೇವೇಗೌಡರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ನಿಖಿಲ್ ಸ್ಪರ್ಧೆಗಾಗಿ ಮಂಡ್ಯದಲ್ಲಿ ದೊಡ್ಡಗೌಡರ ಕುಟುಂಬ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದು, ಇತ್ತ ಈ ಬಾರಿ ಮಂಡ್ಯದಿಂದ ಸ್ವತಃ ದೇವೇಗೌಡರೇ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.
Advertisement
Advertisement
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ನಿಖಿಲ್ ರನ್ನ ಕಣಕ್ಕಿಳಿಸಿದರೆ ಮೊಮ್ಮಗನ ರಾಜಕೀಯ ಎಂಟ್ರಿಯನ್ನು ಸುಲಭ ಜಯದೊಂದಿಗೆ ಆರಂಭಿಸಬಹುದು ಅಂತ ದೊಡ್ಡಗೌಡ ಕುಟುಂಬ ಯೋಚಿಸುತ್ತಿದೆ. ಈ ಎಲ್ಲ ಊಹಾಪೋಹಗಳೂ ಸತ್ಯ ಎಂಬಂತೆ ನಾವು ಈಗಾಗಲೇ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಮಂಡ್ಯ ಜನರು ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಿಖಿಲ್ ಏನಾದರೂ ಮಂಡ್ಯದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವುದು ನಮ್ಮ ಜವಬ್ದಾರಿ ಎಂದು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ.
Advertisement
Advertisement
ಮಂಡ್ಯದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂದು ಖಚಿತವಾಗಿಲ್ಲ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಂಡ್ಯದಿಂದ ದೇವೇಗೌಡರನ್ನು ಸ್ಪರ್ಧೆ ಮಾಡುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ. ನಿಖಿಲ್ ಸ್ಪರ್ಧೆ ಮಾಡಿದರೂ ಓಕೆ ಎಂದು ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿದ್ದಾರೆ. ಇತ್ತ ಮಂಡ್ಯ ಸಂಸದ ಎಲ್‍ಆರ್.ಶಿವರಾಮೇಗೌಡ ಕೂಡ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದು, ಉಪಚುನಾವಣೆಯಲ್ಲಿ ಗೆದ್ದ ನಾನು ಕೆಲವೇ ತಿಂಗಳಿಗೆ ಸಂಸದನಾಗಿಲ್ಲ. ದೇವೇಗೌಡರು ಮತ್ತೊಮ್ಮೆ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಮಂಡ್ಯ ಸಂಸದರಾಗುವ ಕನಸಲ್ಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳೀತಾರೋ ಅಥವಾ ದೇವೇಗೌಡರು ಕಣಕ್ಕಿಳೀತಾರೋ ಎಂಬ ಚರ್ಚೆ ಜಿಲ್ಲೆಯಾದ್ಯಂತ ಜೋರಾಗೆ ಶುರುವಾಗಿದೆ. ಆದರೆ ಅಂತಿಮವಾಗಿ ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv