– ಯಾರು ಏನೇ ಹೇಳಲಿ, ಸಿದ್ದರಾಮಯ್ಯನವರೇ ನಮ್ಮ ಸಿಎಂ: ಶ್ರೀನಿವಾಸಮೂರ್ತಿ
ಬೆಂಗಳೂರು: ನನ್ನ ಮಾತಿನಿಂದಾಗಿ ಸಚಿವ ಕೃಷ್ಣಬೈರೇಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತರು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಮೈತ್ರಿ ನಾಯಕರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕೃಷ್ಣಬೈರೇಗೌಡರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಇಷ್ಟ ಇರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಕೃಷ್ಣಬೈರೇಗೌಡರ ಮೇಲೆ ಒತ್ತಡ ಹಾಕಿದರು. ಆಗ ಅವರು ನೇರವಾಗಿ ನನ್ನ ಬಳಿ ಬಂದು, ಸಿದ್ದರಾಮಯ್ಯ ಅವರು ಒತ್ತಡ ಹಾಕುತ್ತಿದ್ದಾರೆ ಏನ್ ಮಾಡಲಿ ಅಂತ ನನ್ನ ಕೇಳಿದರು. ಸ್ಪರ್ಧೆ ಮಾಡಿ, ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಅಂತ ಅವರಿಗೆ ಧೈರ್ಯ ತುಂಬಿದೆ. ನನ್ನ ಮಾತಿನಿಂದ ಕೃಷ್ಣಬೈರೇಗೌಡರು ಸ್ಪರ್ಧೆಗೆ ಒಪ್ಪಿದರು ಎಂದು ತಿಳಿಸಿದರು.
Advertisement
Advertisement
ಪಕ್ಷದ ನಾಯಕರಿಂದ ಒತ್ತಡ ಬಂದಾಗ ಕೃಷ್ಣಬೈರೇಗೌಡರು ಮನೆಗೆ ಹೋಗಿ, ಸ್ಪರ್ಧೆಯ ಬಗ್ಗೆ ಮನೆಯವರ ಅಭಿಪ್ರಾಯ ಕೇಳಲಿಲ್ಲ. ನೇರವಾಗಿ ನನ್ನ ಬಳಿ ಬಂದು ಕೇಳಿದ್ದರು. ಹೀಗಾಗಿ ನಾವೆಲ್ಲರೂ ಸೇರಿ ಕೃಷ್ಣಬೈರೇಗೌಡ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
Advertisement
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಲ್ಲಿಯವರಲ್ಲ. ಅವರು ಮಂಗಳೂರಿನವರು. ಕೇಂದ್ರ ಸಚಿವರು ಮುಸ್ಲಿಮರಿಗೂ ಕೆಲಸ ಮಾಡಿದ್ದೇನೆ ಅಂತ ಹೇಳುತ್ತಾರೆ. ಆದರೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮುಸ್ಲಿಮರಿಗೆ ನಾವು ಟಿಕೆಟ್ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದು ಬಿಜೆಪಿಯವರ ಧೋರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನ್ ಬರಲಿಲ್ಲ. ನಮಗೆ ಕಾಮ್ ಕಿ ಬಾತ್ ಬೇಕು, ಮನ್ ಕಿ ಬಾತ್ ಬೇಡ. ದೇಶದಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಒಡಕು ತರುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಬಿಜೆಪಿಯವರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ನಾನು ಸಚಿವನಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ನಾಯಕರು ನನಗೆ ಸಚಿವನಾಗುವ ಅವಕಾಶ ಕೊಟ್ಟರು. ಇದು ಕಾಂಗ್ರೆಸ್ ನಿಲುವು. ಎಲ್ಲರ ಏಳಿಗೆಗಾಗಿ ಕಾಂಗ್ರೆಸ್ ದುಡಿಯುತ್ತಿದೆ ಎಂದರು.
ಸಮಾವೇಶದ ಸ್ವಾಗತ ಭಾಷಣ ವೇಳೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು, ಯಾರು ಏನೇ ಹೇಳಲಿ, ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಹೇಳಿದರು. ಸಮಾವೇಶದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕೃಷ್ಣಬೈರೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಬೈರತಿ ಬಸವರಾಜು, ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಭಾಗವಹಿಸಿದ್ದರು.