– ಪರಿಶೀಲನಾ ವೆಚ್ಚವನ್ನು ಪರಾಜಿತ ಅಭ್ಯರ್ಥಿ ಭರಿಸಬೇಕು
ನವದೆಹಲಿ: ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಜೊತೆಗೆ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಸ್ಲಿಪ್‌ಗಳನ್ನು 100% ತಾಳೆ ಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ವಜಾ ಮಾಡಿದೆ. ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಬ್ಯಾಲೇಟ್ ಪೇಪರ್ ವ್ಯವಸ್ಥೆಗೆ ಮರಳಲು ನಿರಾಕರಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಅಭಯ್ ಭಕ್ಚಂದ್ ಛಾಜೆದ್ ಮತ್ತು ಅರುಣ್ ಕುಮಾರ್ ಅಗರ್‌ವಾಲ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತನ್ನ ಆದೇಶ ಪ್ರಕಟಿಸಿತು. ಮತ್ತೆ ಮತಪತ್ರಗಳನ್ನು ತರುವುದಕ್ಕೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ನಾವು ತಿರಸ್ಕರಿಸಿದ್ದೇವೆ ಎಂದು ಕೋರ್ಟ್ ಹೇಳಿತು. ಇದನ್ನೂ ಓದಿ: ಪ್ರಧಾನಿ ಮೋದಿಯನ್ನ ಚುನಾವಣೆಯಿಂದ 6 ವರ್ಷ ಅನರ್ಹಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ
ಇದೇ ವೇಳೆ ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ನೀಡಿತು. ಮೇ 1 ನಂತರದ ಎಲ್ಲಾ ಸಿಂಬಲ್ ಲೋಡಿಂಗ್ ಯೂನಿಟ್‌ಗಳನ್ನು (SLU) ಸೀಲ್ ಮಾಡಿ ಮತ್ತು ಸುರಕ್ಷಿತಗೊಳಿಸಬೇಕು. ಈ ಎಸ್‌ಎಲ್‌ಯುಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಹಿಯೊಂದಿಗೆ ಕಂಟೈನರ್‌ಗಳಲ್ಲಿ ಸೀಲ್ ಮಾಡಿ ಭದ್ರಪಡಿಸಬೇಕು. ಎಸ್‌ಎಲ್‌ಯುಗಳನ್ನು ಇವಿಎಂ (EVM) ಜೊತೆಗೆ ಫಲಿತಾಂಶಗಳ ಘೋಷಣೆಯ ನಂತರ ಸ್ಟ್ರಾಂಗ್ ರೂಮ್‌ಗಳಲ್ಲಿ ಕನಿಷ್ಠ 45 ದಿನಗಳ ಸಂಗ್ರಹಿಸಬೇಕು. ಎಸ್‌ಎಲ್‌ಯುಗಳನ್ನು ಇವಿಎಂಗಳ ರೀತಿಯಲ್ಲಿಯೇ ವ್ಯವಹರಿಸಬೇಕು ಎಂದು ಮೊದಲ ನಿರ್ದೇಶನ ನೀಡಿತು.
ಎರಡನೇ ಮಾರ್ಗಸೂಚಿಯಲ್ಲಿ ಇವಿಎಂ ಪರಿಶೀಲನೆಗೆ ಅಭ್ಯರ್ಥಿಗಳಿಗೆ ಆಯ್ಕೆ ನೀಡಲಾಗಿದೆ. ಇವಿಎಂಗಳಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಪರಾಜಿತ ಎರಡನೇ ಮತ್ತು ಮೂರನೇ ಅಭ್ಯರ್ಥಿ ಫಲಿತಾಂಶವನ್ನು ಪ್ರಶ್ನೆ ಮಾಡಬಹುದಾಗಿದೆ. ಸಂಸತ್ ಕ್ಷೇತ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಇವಿಎಂಗಳಲ್ಲಿ ಬರ್ನ್ಟ್ ಮೆಮೊರಿ ಸೆಮಿಕಂಟ್ರೋಲರ್ ಅನ್ನು ಪರಿಶೀಲಿಸಲು ಬೂತ್ ನಂಬರ್‌ಗಳೊಂದಿಗೆ ವಿನಂತಿಸಬಹುದು. ಫಲಿತಾಂಶ ಪ್ರಕಟಿಸಿದ 7 ದಿನಗಳ ಒಳಗಾಗಿ ಲಿಖಿತ ಕೋರಿಕೆ ಸಲ್ಲಿಸಬೇಕು. ಅಂತಹ ಲಿಖಿತ ವಿನಂತಿಯನ್ನು ಸ್ವೀಕರಿಸಿದ ನಂತರ ಇವಿಎಂಗಳನ್ನು ಇವಿಎಂಗಳ ತಯಾರಕರಿಂದ ಎಂಜಿನಿಯರ್‌ಗಳ ತಂಡವು ಪರಿಶೀಲಿಸುತ್ತದೆ. ಪರಿಶೀಲನಾ ಪ್ರಕ್ರಿಯೆಯ ವೆಚ್ಚಗಳನ್ನು ಪರಾಜಿತ ಅಭ್ಯರ್ಥಿಯು ಭರಿಸಬೇಕಾಗುತ್ತದೆ. ಇವಿಎಂಗಳು ಟ್ಯಾಂಪರ್ ಆಗಿರುವುದು ಕಂಡುಬಂದರೆ ಅಭ್ಯರ್ಥಿಗೆ ವೆಚ್ಚವನ್ನು ಮರುಪಾವತಿಸಲಾಗುತ್ತದೆ ಎಂದು ಕೋರ್ಟ್ ತನ್ನ ಮಹತ್ವದ ಆದೇಶದಲ್ಲಿ ತಿಳಿಸಿದೆ.