ನವದೆಹಲಿ: ಲೋಕಸಭಾ ಚುನಾವಣಾ (Lok Sabha Election) ದಿನಾಂಕ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲು ಮುಂದಾಗುತ್ತಿದೆ. ಮಾರ್ಚ್ 13ರ ಒಳಗಡೆ ಪ್ರಧಾನಿ ಹಲವು ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 11 ರಂದು ಹರ್ಯಾಣದ ದ್ವಾರಕಾ ಎಕ್ಸ್‌ಪ್ರೆಸ್‌ವೇ ವಿಸ್ತರಣೆ ಕಾರ್ಯಕ್ರಮಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗಳ ಒಟ್ಟು 100 ರಾಷ್ಟ್ರೀಯ ಹೆದ್ದಾರಿ ಯೋಜನೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಸಫಾರಿ
14,000 ಕೋಟಿ ರೂ. ವೆಚ್ಚದ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ (Bengaluru-Vijayawada Expressway), 8000 ಕೋಟಿ ರೂ. ವೆಚ್ಚದ ಬೆಳಗಾವಿ-ರಾಯಚೂರು (Belagavi-Raichuru) ಹೆದ್ದಾರಿ, 5,000 ಕೋಟಿ ರೂ. ವೆಚ್ಚದ ಶಾಮ್ಲಿ-ಅಂಬಾಲ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಚೀನಾಗೆ ಠಕ್ಕರ್ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ
ಒಂದೇ ದಿನದಲ್ಲಿ ಹಲವಾರು ಯೋಜನೆ ಲೋಕಾರ್ಪಣೆ ಮಾಡಲಾಗುವುದು ಮತ್ತು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಉದ್ಘಾಟನೆಗೊಳ್ಳಲಿರುವ ಯೋಜನೆಗಳಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇ, ಹಿಮಾಚಲ ಪ್ರದೇಶದ ಕಿರಾತ್‌ಪುರ್-ನೇರ್ ಚೌಕ್ ಮತ್ತು ಬಿಹಾರದ ನಾರಾಯಣಪುರ-ಪುರ್ನಿಯಾ ವಿಸ್ತರಣೆಯ ಎರಡು ಪ್ಯಾಕೇಜ್‌ಗಳು ಸೇರಿವೆ.
ಮಂಗಳವಾರ ಮೋದಿ ಅವರು ಗುಜರಾತ್‌ಗೆ ಭೇಟಿ ನೀಡಲಿದ್ದು ಈ ವೇಳೆ ಸುಮಾರು ಒಂದು ಡಜನ್ ವಂದೇ ಭಾರತ್ (Vande Bharat) ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಮಾರ್ಚ್ 12 ರೊಳಗೆ ಮೂಲಸೌಕರ್ಯ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುವಂತೆ ಯೋಜನೆಗಳ ಅಂತಿಮಗೊಳಿಸುವಂತೆ ಕಳೆದ ವಾರ ಪ್ರಧಾನಮಂತ್ರಿ ಅವರು ತಮ್ಮ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು.