ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ರಾಹುಲ್ ಗಾಂಧಿ (Rahul Gandhi) ಅವರು ಅದಾನಿ ಗ್ರೂಪ್ (Adani Group) ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡದಂತೆ ಆದೇಶ ನೀಡಬೇಕೆಂದು ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರರು ಸಾಮಾಜಿಕ ಕಾರ್ಯಕರ್ತ, ರೈತ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮೋದಿಯವರ ಭಾಷಣಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ
ರಾಹುಲ್ ಗಾಂಧಿ ಮತ್ತು ಮೋದಿ ಸುಳ್ಳು, ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪ ಮಾಡಿರುವ ಅವರು ಅದಾನಿ ಗ್ರೂಪ್ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.
ತನ್ನ ವಿರುದ್ಧ ಸುಳ್ಳು ಆರೋಪ ಮಾಡುವುದರಿಂದ ತನ್ನ ಮಾರುಕಟ್ಟೆ ಮೌಲ್ಯ ಮತ್ತು ಹೂಡಿಕೆದಾರರ ಹಿತಾಸಕ್ತಿಗಳಿಗೆ ಹಾನಿಯುಂಟಾಗುತ್ತದೆ. ಕೈಗಾರಿಕೋದ್ಯಮಿಗಳ ವಿರುದ್ಧ ಇಂತಹ ನಕಾರಾತ್ಮಕ ಪ್ರಚಾರವು ಷೇರು ಮಾರುಕಟ್ಟೆಯಲ್ಲಿ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ. ನಾನು ಸ್ವತಃ ಹೂಡಿಕೆದಾರನಾಗಿದ್ದು ಅದಾನಿ ಗ್ರೂಪ್ ಪಟ್ಟಿ ಮಾಡಿದ ಕೆಲ ಕಂಪನಿಗಳಲ್ಲಿ ನಾನು ಹೂಡಿಕೆ ಮಾಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು
ಇಂತಹ ಸುಳ್ಳು, ಕಪೋಲಕಲ್ಪಿತ ಮತ್ತು ತಪ್ಪುದಾರಿಗೆಳೆಯುವ ಭಾಷಣಗಳು ಸಾಮಾನ್ಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರಪಂಚದ ದೃಷ್ಟಿಯಲ್ಲಿ ದೇಶದ ಇಮೇಜ್ ಹಾಳಾಗುತ್ತದೆ. ಇದು ವಿದೇಶಿ ಹೂಡಿಕೆಯ ಮೇಲೆ ಪರಿಣಾಮ ಬೀರುವಂತಹ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳ ಋಣಾತ್ಮಕ ಪ್ರಚಾರದಿಂದ ಸ್ಟಾಕ್ ಮಾರುಕಟ್ಟೆ ಪರಿಣಾಮ ಬೀರುತ್ತದೆ. ಈ ಕೆಟ್ಟ ಪ್ರಚಾರ ದೇಶದ ಆರ್ಥಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮತ್ತು ಅದಾನಿ ಗೂಪ್ ರಕ್ಷಣೆಗೆ ಕೋರ್ಟ್ ಮುಂದಾಗಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.