ಮಂಡ್ಯ: ಲೋಕಸಭಾ ಚುನಾವಣೆಗೆ (Lok Sabha Election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತೆ ಮಂಡ್ಯದಿಂದ (Mandya) ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ನಿಖಿಲ್ ಮಂಡ್ಯ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.
ಬಿಜೆಪಿ (BJP) ಜೊತೆ ಜೆಡಿಎಸ್ (JDS) ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜಿಲ್ಲೆಯ ಜೆಡಿಎಸ್ ನಾಯಕರು ಮಂಡ್ಯದಿಂದಲೇ ನಿಖಿಲ್ ಸ್ಪರ್ಧೆ ಮಾಡಬೇಕೆಂದು ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೇ ನಿಖಿಲ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಂಬ ಮಾತು ಜೆಡಿಎಸ್ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಈಗ ಈ ಎಲ್ಲಾ ಮಾತುಗಳಿಗೆ ನಿಖಿಲ್ ಪೂರ್ಣವಿರಾಮ ಹಾಕಿದ್ದು ಮಂಡ್ಯದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಇಳಿದ ಎಸ್‌ಟಿ ಸೋಮಶೇಖರ್
ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ನಿಖಿಲ್ ಹೇಳುವುದರ ಹಿಂದೆ ಹಲವು ಅಂಶಗಳು ಇರಬಹುದು ಎಂದು ವಿಮರ್ಶಿಸಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಲ್ಲಿ ನಿಖಿಲ್ ಹೆಚ್ಚು ಸಕ್ರಿಯರಾಗಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಬಿಟ್ಟು ರಾಮನಗರದಲ್ಲಿ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಒಂದು ವೇಳೆ ನಿಖಿಲ್ ಮಂಡ್ಯದಲ್ಲೇ ಮರಳಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ (Congress) ನಾಯಕರು ಅವಕಾಶವಾದಿ ರಾಜಕಾರಣಿ ಎಂದು ಕರೆಯುವ ಸಾಧ್ಯತೆ ಇತ್ತು. ಈಗಾಗಲೇ ಎರಡು ಸೋಲು ಕಂಡಿರುವ ನಿಖಿಲ್ ರಾಜಕೀಯ ಜೀವನದಲ್ಲಿ ಮತ್ತೆ ಸೋಲಾದರೆ ಹ್ಯಾಟ್ರಿಕ್ ಸೋಲನ್ನು ಅನುಭವಿಸಿದ ಸಿಎಂ ಪುತ್ರ ಎಂಬ ಹಣೆಪಟ್ಟಿ ಕಟ್ಟಬಹುದು.
ಅಖಾಡಕ್ಕೆ ಇಳಿದರೆ ಮತ್ತೆ ಕಾಂಗ್ರೆಸ್ ನಾಯಕರು ಸ್ವಾಭಿಮಾನದ ಅಸ್ತ್ರ ಬಿಡುತ್ತಿದ್ದರು. ಮಂಡ್ಯಗೆ ಹೊರಗಿನವರು ಬಂದಿದ್ದಾರೆ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಕಾಂಗ್ರೆಸ್ ಪ್ರಚಾರ ನಡೆಸಬಹುದು. ಈ ಕಾರಣಗಳನ್ನು ಇಟ್ಟುಕೊಂಡು ಮಂಡ್ಯ ಚುನಾವಣಾ ರಾಜಕೀಯದಿಂದ ನಿಖಿಲ್ ಹಿಂದೆ ಸರಿದಿರಬಹುದು ಎಂದು ವಿಮರ್ಷಿಸಲಾಗುತ್ತಿದೆ.
ನಾನು ಮಂಡ್ಯದಿಂದ ಸ್ಪರ್ಧೆ ಮಾಡಲ್ಲ, ನನ್ನ ಹೇಳಿಕೆಯಿಂದ ಯೂಟರ್ನ್ ಹೊಡೆಯಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ನಿಖಿಲ್ ಮುಂದೆ ಯಾವ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.