ಬೀದರ್: ಮುಸ್ಲಿಮರಿಗೆ(Muslims) ನೀಡಲಾಗಿರುವ 4%ರಷ್ಟು ಮೀಸಲಾತಿಯನ್ನು (Reservation) ಮುಂದುವರೆಸುತ್ತೇವೆ ಎಂದು ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹೇಳಿತ್ತು. ಈಗಲೂ ಆ ಮೀಸಲಾತಿ ಮುಂದುವರಿದಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಒಬಿಸಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ ಎಂಬ ಮೋದಿ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಇಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದವು. ಇದನ್ನೂ ಓದಿ: ಕರ್ನಾಟಕದಲ್ಲಿ ಸಂವಿಧಾನ ವಿರುದ್ಧವಾಗಿ ಒಬಿಸಿ ಮೀಸಲಾತಿ ಮುಸ್ಲಿಮರ ಪಾಲು – ಕಾಂಗ್ರೆಸ್ ವಿರುದ್ಧ ಮತ್ತೆ ಮೋದಿ ಕಿಡಿ
ಈ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಸಿದ್ದರಾಮಯ್ಯ, ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗವು ಮುಸ್ಲಿಮರಿಗೆ 4%ರಷ್ಟು ಮೀಸಲಾತಿ ಕೊಡಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಸುಮಾರು 28 ವರ್ಷಗಳಿಂದ ಮುಸ್ಲಿಮರಿಗೆ 4% ರಷ್ಟು ಮೀಸಲಾತಿ ಮುಂದುವರೆದಿದೆ. ಬೊಮ್ಮಾಯಿ ಸರ್ಕಾರ ಈ ಮೀಸಲಾತಿಯನ್ನು ರದ್ದು ಹಾಕಿತ್ತು. ನಂತರ ಸುಪ್ರೀಂ ಕೋರ್ಟ್ ಈಗ ಮೀಸಲಾತಿಯನ್ನು ಹಾಗೆಯೇ ಮುಂದುವರಿಸಿ ಎಂದು ಸೂಚಿಸಿತ್ತು. ಈಗಲೂ ಆ ಮೀಸಲಾತಿ ಮುಂದುವರಿದಿದ್ದು, ಬಿಜೆಪಿಯವರು ಸುಪ್ರೀಂಗೆ ಅಫಿಡವಿಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಏನಿದು ಮೀಸಲಾತಿ ವಿವಾದ?
ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ (Reservation) ನೀಡುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು (Muslim) ಇತರೇ ಹಿಂದುಳಿದ ವರ್ಗಗಳ ಕೆಟಗರಿಗೆ ಸೇರಿಸಲು ಶಿಫಾರಸು ಮಾಡಿದೆ. ಈ ವಿಚಾರವನ್ನು ಪ್ರಸ್ತಾಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇಂದು ಮಧ್ಯಪ್ರದೇಶದ ಮೊರೇನಾದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ರಾತ್ರೋರಾತ್ರಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ವರ್ಗವನ್ನು ಒಬಿಸಿಗೆ ಸೇರಿಸಿ ಆದೇಶ ಹೊರಡಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮಾನ್ಯತೆ ನೀಡಿವ ಮೂಲಕ ಒಬಿಸಿ ಜನರ ಅವಕಾಶಗಳನ್ನು ಕಳ್ಳತನದಿಂದ ಕಿತ್ತುಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ – ಸ್ಪಷ್ಟನೆ ನೀಡುವಂತೆ ಬಿಜೆಪಿ, ಕಾಂಗ್ರೆಸ್‍ಗೆ EC ಸೂಚನೆ
ಎನ್‌ಸಿಬಿಸಿ ಹೇಳಿದ್ದೇನು?
ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (NCBC) ಅಸಮಾಧಾನ ವ್ಯಕ್ತಪಡಿಸಿದೆ. ಮೀಸಲಾತಿ ನೀಡಲು ಮುಸ್ಲಿಮರನ್ನು ಒಬಿಸಿ ಕೆಟಗರಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಬೇಕೇ ಹೊರತು, ಇಡೀ ಧರ್ಮವನ್ನೇ ಒಬಿಸಿಗೆ ಸೇರಿಸಿರುವುದು ಸರಿಯಲ್ಲ ಎಂದು ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.