ಮೈಸೂರು: ಚಾಮರಾಜನಗರ (Chamarajanagar) ಲೋಕಸಭಾ (Lok Sabha Election) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿಚಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ (Mahadevappa) ಅವರಿಗೆ ಡಬಲ್ ಒತ್ತಡವಿದೆ. ಕೌಟುಂಬಿಕ ಒತ್ತಡದ ಜೊತೆಗೆ ಪಕ್ಷದ ಒತ್ತಡ. ಎರಡೂ ಒತ್ತಡಗಳ ನಡುವೆ ಸಚಿವರು ಒದ್ದಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಕೆಲ ಸಚಿವರು ಕಣಕ್ಕೆ ಇಳಿಯಬೇಕು. ಪಕ್ಷಕ್ಕಾಗಿ ತ್ಯಾಗಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳುತ್ತಿದ್ದಂತೆ ಬಹುತೇಕ ಸಚಿವರು ಬೆಚ್ಚಿದ್ದಾರೆ. ನಮಗಂತೂ ಈ ಲೋಕಸಭಾ ಚುನಾವಣೆ ಉಸಾಬರಿ ಬೇಡ ಎಂದು ಕೆಲ ಸಚಿವರು ಅದರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಾರೆ. ಆದರೆ ಇದರಲ್ಲಿ ಸಚಿವ ಮಹದೇವಪ್ಪ ಅವರ ಸ್ಥಿತಿ ಮಾತ್ರ ಬಹಳ ವಿಭಿನ್ನ. ಸಚಿವರ ಮನೆ ಬಾಗಿಲಲ್ಲೇ ಟಿಕೆಟ್ ಇದ್ದರೂ ಸ್ಪರ್ಧೆಗೆ ಇಷ್ಟವೂ ಇಲ್ಲ. ಹಾಗಂತ ಟಿಕೆಟ್ ಅನ್ನು ಬೇರೆ ಮನೆ ಹೊಸ್ತಿಲಿಗೆ ಹಾಕುವ ಸ್ಥಿತಿಯಲ್ಲೂ ಸಚಿವರಿಲ್ಲ. ಇದನ್ನೂ ಓದಿ: ಮೋದಿ ಕೆಲಸಗಳಿಂದ ಪ್ರೇರಣೆ- ಆಪ್‌ನ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ
ಎಚ್.ಸಿ. ಮಹದೇವಪ್ಪಗೆ ಲೋಕಸಭೆಗೆ ಸ್ಪರ್ಧಿಸಲು ಸುತರಾಂ ಇಷ್ಟವಿಲ್ಲ. ಬೇರೆಯವರಿಗೆ ಕೊಡಿ ಎಂದೂ ಇಷ್ಟವಿಲ್ಲದೇ ನನಗೆ ಬೇಡ ಆದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಮೂರು ವಿಧಾನಸಭಾ ಟಿಕೆಟ್ ತಪ್ಪಿದೆ. ಮಗ ಸುನೀಲ್ ಬೋಸ್‌ಗೆ (Sunil Bose) ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಲು ಮನಸ್ಸು ಮಾಡದೇ ಮಹದೇವಪ್ಪಗೇ ಸ್ಪರ್ಧಿಸಲು ಸೂಚಿಸುತ್ತಿದೆ. ಇದರಿಂದ ಮಹದೇವಪ್ಪ ಸಿಟ್ಟಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ನನಗಿಂತಾ ಸಿಎಂ ಹಾಗೂ ಡಿಸಿಎಂ ಸ್ಟ್ರಾಂಗ್ ಕ್ಯಾಂಡಿಡೇಟ್ ಇದ್ದಾರೆ. ಅವರಿಗೂ ಒಂದೊಂದು ಕ್ಷೇತ್ರ ಹುಡುಕಿ ಅಂತಾ ಬಹಿರಂಗವಾಗಿ ಹೇಳುವ ಮೂಲಕ ತಮಗೆ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು
ಒಟ್ಟಾರೆ ಲೋಕಸಭೆ ಟಿಕೆಟ್ ವಿಚಾರ ಮಹದೇವಪ್ಪಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊಟ್ಟರೆ ಮಗನಿಗೆ ಟಿಕೆಟ್ ಕೊಡಿ ಅಂತ ಪಟ್ಟಿಗೆ ಬಿದ್ದಿದ್ದಾರೆ. ಹೈಕಮಾಂಡ್ ನಿರ್ಧಾರದ ಮೇಲೆ ಚಾಮರಾಜನಗರ ಕ್ಷೇತ್ರದ ಅಖಾಡ ರಂಗೇರಲಿದೆ.