ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

Public TV
2 Min Read
Lok Sabha Election 2024 Ex bureaucrats Sukhbir Sandhu Gyanesh Kumar named Election Commissioners

– ಮೋದಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ನವದೆಹಲಿ: ಚುನಾವಣಾ ಆಯೋಗದಲ್ಲಿ (Election Commissioners) ಖಾಲಿ ಇರುವ ಎರಡು ಆಯುಕ್ತರ (Commissioners) ಹುದ್ದೆಗೆ ನಿವೃತ್ತ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸುಖಬೀರ್ ಸಿಂಗ್ ಸಂಧು (Sukhbir Sing Sandhu) ಮತ್ತು ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ತಿಳಿಸಿದರು.

ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಚುನಾವಣಾ ಆಯೋಗವು ತಯಾರಿ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೆರವಾಗಲು ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧೀರ್‌ ರಂಜನ್‌ ಚೌಧರಿ ಭಾಗಿಯಾಗಿದ್ದರು.

ELECTION COMMISSION OF INDIA

ಸಭೆ ಮುಗಿದ ಕೂಡಲೇ ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಇಬ್ಬರು ಚುನಾವಣಾ ಆಯೋಗಗಳ ಆಯ್ಕೆಗೆ ಆರು ಹೆಸರುಗಳು ಸಮಿತಿಯ ಮುಂದೆ ಬಂದಿದ್ದವು. ಹೆಚ್ಚಿನ ಸದಸ್ಯರು ಸಂಧು ಮತ್ತು ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಬಾಕಿ ಉಳಿದ ಬಿಜೆಪಿಯ 5 ಕ್ಷೇತ್ರಗಳಲ್ಲೂ ಹಾಲಿ ಸಂಸದರಿಗೆ ಟಿಕೆಟ್ ಮಿಸ್? – ಕಾರಣ ಏನು? 

ಸಂಧು ಮತ್ತು ಜ್ಞಾನೇಶ್ ಕುಮಾರ್ 1988 ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ. ಸಂಧು ಉತ್ತರಾಖಂಡ್ ಕೇಡರ್‌ನಿಂದ ಬಂದಿದ್ದರೆ, ಕುಮಾರ್ ಕೇರಳ ಕೇಡರ್‌ನಿಂದ ಆಯ್ಕೆ ಆಗಿದ್ದರು.

ಸಂಧು ಅವರು ಈ ಹಿಂದೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಪ್ರಮುಖ ಸರ್ಕಾರಿ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಜ್ಞಾನೇಶ್ ಕುಮಾರ್ ಅವರು ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿ ಆರ್ಟಿಕಲ್ 370 ರದ್ದತಿಯನ್ನು ಮೇಲ್ವಿಚಾರಣೆ ಮಾಡಿದ್ದರು.

 

ನೇಮಕಾತಿ ಹೇಗೆ ನಡೆಯುತ್ತೆ?
ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದರ ಅನ್ವಯ ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.

ಮೊದಲು ಶೋಧ ಸಮಿತಿಯನ್ನು ರಚಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ, ಕೇಂದ್ರ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. ಇವರು ಐವರು ಹೆಸರುಗಳನ್ನು ಸೂಚಿಸಬೇಕು. ನಂತರ ಈ ಪಟ್ಟಿಯ ಆಯ್ಕೆ ಸಮಿತಿ ಮುಂದೆ ಹೋಗುತ್ತದೆ. ಈ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷ ಇಲ್ಲದೇ ಇದ್ದರೆ, ಲೋಕಸಭೆಯ ಅತ್ಯಂತ ದೊಡ್ಡ ಪ್ರತಿ ಪಕ್ಷದ ನಾಯಕ) ಹಾಗೂ ಪ್ರಧಾನಿ ನೇಮಿಸಿದ ಸಂಪುಟ ದರ್ಜೆಯ ಸಚಿವ ಸದಸ್ಯರಾಗಿರುತ್ತಾರೆ.

ಈ ಐವರ ಬಗ್ಗೆ ಆಯ್ಕೆ ಸಮಿತಿ ಚರ್ಚಿಸಿ ನೇಮಕ ಮಾಡಬೇಕು. ಶೋಧ ಸಮಿತಿ ಸೂಚಿಸಿದ ಹೆಸರುಗಳನ್ನೇ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಳ್ಳಬೇಕಿಲ್ಲ. ಆ ಪಟ್ಟಿಯಲ್ಲಿ ಇಲ್ಲದೇ ಇದ್ದವರನ್ನೂ ನೇಮಕ ಮಾಡಬಹುದು.

 

Share This Article