ಕೋಲಾರದಲ್ಲಿ `ಕೈ’ ನಾಯಕರ ಪ್ರತಿಷ್ಠೆಗೆ ಮಕಾಡೆ ಮಲಗಿದ ಕಾಂಗ್ರೆಸ್

Public TV
2 Min Read
BJP Congress

ಕೋಲಾರ: ಕಾಂಗ್ರೆಸ್‌ನ ಭದ್ರಕೋಟೆ ಕೋಲಾರ (Kolar) ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ (Congress) ಸತತ ಎರಡನೇ ಸೋಲಾಗುವ ಮೂಲಕ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ಗೆ ಒಳ ಏಟು ಬಿದ್ದಿದ್ದು, ರಾಜೀನಾಮೆ ಪ್ರಹಸನ ಮಾಡಿದ ರೆಬಲ್ ಶಾಸಕ, ಸಚಿವರಿಗೆ ತೀವ್ರ ಹಿನ್ನಡೆಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ವರ್ಷ ಕಳೆಯುವ ಮುನ್ನವೇ ಮತದಾರರು ಪಾಠ ಕಲಿಸಿದ್ದಾರೆ. ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರ ಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಕಾಂಗ್ರೆಸ್ ಕಳೆದುಕೊಂಡಿದೆ. ಕ್ಷೇತ್ರದಲ್ಲಿ ಐವರು ಕಾಂಗ್ರೆಸ್, ಇಬ್ಬರು ಮೇಲ್ಮನೆ ಸದಸ್ಯರು, ಒಬ್ಬರು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲೆಯವರೇ ಆದ ಸಚಿವ ಕೆ.ಹೆಚ್.ಮುನಿಯಪ್ಪ ಇದ್ದರೂ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಮೈತ್ರಿ ಟಕ್ಕರ್ ಕೊಟ್ಟಿದೆ. ಆದರೆ ಕೊನೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೆ.ವಿ.ಗೌತಮ್ ಹರಕೆಯ ಕುರಿಯಾದರು ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

ಕೋಲಾರ ಕ್ಷೇತ್ರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಕೆ.ಹೆಚ್.ಮುನಿಯಪ್ಪ ಮಧ್ಯೆ ಇರುವ ಕಿತ್ತಾಟ, ಎಡ-ಬಲ ಸಮುದಾಯದ ಗೊಂದಲ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಈಗ ಪಕ್ಷಕ್ಕೆ ಮುಳುವಾಗಿದೆ. ಇನ್ನು ಕೆಲ ಕಾಂಗ್ರೆಸ್ ನಾಯಕರು ನಾನು ಎಂದು ಮೆರೆಯುತ್ತಿದ್ದರು. ಅವರಿಗೆ ತಕ್ಕ ಪಾಠ ಸಿಕ್ಕಿದೆ ಅನ್ನೋದು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮಾತು. ಮುನಿಯಪ್ಪ ಕೂಡ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ್ದು, ಸೋಲಿನಲ್ಲಿ ಅಂತ್ಯ ಕಂಡಿದೆ. ಹಾಗಾಗಿ ಕೋಲಾರ ಸೋಲಿಗೆ ಟಿಕೆಟ್ ಕೊಡಿಸಿದವರನ್ನೆ ಕೇಳಿ ಎನ್ನುವ ಮೂಲಕ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

ಕಾಂಗ್ರೆಸ್‌ನ ಕಿತ್ತಾಟಕ್ಕಿಂತ ಮೈತ್ರಿಯೇ ಉತ್ತಮ ಅನ್ನೋ ನಂಬಿಕೆಯಿಂದ ಕೋಲಾರ ಮತದಾರರು ಮೈತ್ರಿ ಅಭ್ಯರ್ಥಿಗೆ ಜೈ ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಮಕಾಡೆ ಮಲಗಿಸಿದ್ದಾರೆ. ಕಾಂಗ್ರೆಸ್ ಸೋಲಿಗೆ ರಮೇಶ್ ಕುಮಾರ್ ಟೀಂ ಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ ಕೋಲಾರಕ್ಕೆ ಯಾವುದೇ ಯೋಜನೆ ತಂದಿಲ್ಲ. ಬಜೆಟ್‌ನಲ್ಲೂ ಕೋಲಾರವನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನವೂ ಸಿಕ್ಕಿಲ್ಲ ಎಂಬ ಅಂಶಗಳು ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!

ರಾಜ್ಯ ರಾಜಕೀಯದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಗೆ ಸಖತ್ ಸೌಂಡ್ ಮಾಡಿತ್ತು. ರಾಜೀನಾಮೆ ಪ್ರಹಸನವೂ ಕೂಡ ಪಕ್ಷಕ್ಕೆ ಮುಳುವಾದಂತೆ ಕಾಣಿಸುತ್ತಿದೆ. ಕೋಲಾರ ಕಾಂಗ್ರೆಸ್‌ನ 2 ಬಣಗಳನ್ನು ಒಂದುಗೂಡಿಸುವುದರಲ್ಲಿ ಹೈಕಮಾಂಡ್ ಕೂಡ ವಿಫಲವಾಗಿದ್ದು, ಇದು ಕೂಡ ಗೌತಮ್ ಸೋಲಿಗೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ

Share This Article