ಮಂಡ್ಯ: ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ (BJP-JDS Alliance) ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಇಷ್ಟು ದಿನ ಇತ್ತು. ಇದೀಗ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಎಂದು ಖಚಿತವಾಗಿದೆ. ಇದೀಗ ಬಿಜೆಪಿ-ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ರಣತಂತ್ರ ಮಾಡಲು ಮುಂದಾಗಿದ್ದಾರೆ. ಈ ರಣತಂತ್ರದ ಆರಂಭಿಕ ಭಾಗ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವುದಾಗಿದೆ. ಹೀಗಾಗಿ ಇಂದು ಮಂಡ್ಯದಲ್ಲಿ (Mandya) ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಲಿದೆ.
ಈಗಾಗಲೇ ಕುಮಾರಸ್ವಾಮಿ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು, ಮಂಡ್ಯದಲ್ಲಿ ಕೆಲ ನಾಯಕರಲ್ಲಿ ಇದ್ದ ಭಿನ್ನಮತವನ್ನು ಶಮನ ಮಾಡುವಲ್ಲಿ ಮುಂದಾಗಿದ್ದಾರೆ. ಮಾಜಿ ಸಚಿವ ನಾರಾಯಣಗೌಡ ಅವರು ಈ ಮೈತ್ರಿ ವಿರೋಧಿಸಿ ಕಾಂಗ್ರೆಸ್‌ಗೆ ಹೋಗ್ತಾರೆ ಎಂದು ಹೇಳಲಾಗಿತ್ತು. ಈ ವಿಚಾರವನ್ನು ಸ್ವತಃ ಸಚಿವ ಚಲುವರಾಯಸ್ವಾಮಿಯೇ ಖಾತ್ರಿಪಡಿಸಿದ್ದರು. ಇದೀಗ ಕುಮಾರಸ್ವಾಮಿ ಅವರೇ ನಾರಾಯಣಗೌಡ ಅವರ ಮನೆಗೆ ಹೋಗಿ ಇಷ್ಟು ದಿನ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿದ್ದಾರೆ. ಇದೀಗ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಇಂದು ಸಮನ್ವಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯೂ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ನೇತೃತ್ವದಲ್ಲಿ ನಡೆಯಲಿದ್ದು, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಪುಟ್ಟರಾಜು, ತಮ್ಮಣ್ಣ, ಸಾ.ರಾ.ಮಹೇಶ್, ನಾರಾಯಣಗೌಡ ಸೇರಿದಂತೆ ಮಾಜಿ ಶಾಸಕರು ಹಾಗೂ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ ಅವರ ಗೆಲುವಿಗೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದ್ದು, ಆಯಾಯ ಭಾಗದ ನಾಯಕರು ಮುಖಂಡರಿಗೆ ಕೆಲ ಟಾಸ್ಕ್ ಸಹ ನೀಡಲಾಗುತ್ತದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮಾ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ಮುಂದೂಡಿಕೆ
Advertisement
Advertisement
ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಏನೋ ನಡೆಯುತ್ತೆ. ಆದರೆ ಬಿಜೆಪಿ ಬೆಂಬಲಿತ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಏನು ಮಾಡ್ತಾರೆ ಎಂದು ಇದುವರೆಗೆ ತಿಳಿದು ಬಂದಿಲ್ಲ. ಮಂಡ್ಯವನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಇಂದಿನ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಸುಮಲತಾ ಅವರು ಕಾಣಿಸಿಕೊಳ್ತಾರಾ? ಅಥವಾ ಸುಮಲತಾ ಅವರ ರಾಜಕೀಯ ನಡೆ ಬೇರೆಯಾಗಿ ಅವರು ಸಭೆಗೆ ಬರುವುದೇ ಇಲ್ವಾ ನೋಡಬೇಕಿದೆ.
Advertisement
Advertisement
ಒಟ್ಟಾರೆ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಇದೀಗ ದಳಪತಿಯ ಗೆಲುವಿಗಾಗಿ ದೋಸ್ತಿಗಳು ಕಾಂಗ್ರೆಸ್ ವಿರುದ್ಧ ಚುನಾವಣೆಯ ಹೋಂವರ್ಕ್ ಆರಂಭಿಸಿದ್ದು, ಈ ಹೋಂವರ್ಕ್‌ನ ರಣತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಧಾಕರ್ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ