ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ತಿರಸ್ಕರಿಸುವಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಒತ್ತಾಯಿಸುತ್ತಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 6 ಜನ ಅಧಿಕಾರಿಗಳು ಎಲ್ಲಾ ಅಭ್ಯರ್ಥಿಗಳ ಏಜೆಂಟ್‍ಗಳ ಮುಂದೆ ನಾಮಪತ್ರ ಪರಿಶೀಲನೆ ನಡೆಸಿದ್ದರು. ಒಂದು ವೇಳೆ ಯಾವುದೇ ಅಭ್ಯರ್ಥಿಯ ನಾಮಪತ್ರದ ಬಗ್ಗೆ ಆಕ್ಷೇಪಗಳಿದ್ದರೆ ತಿಳಿಸುವಂತೆ ಅಧಿಕಾರಿಗಳು ಏಜೆಂಟ್‍ಗಳಿಗೆ ತಿಳಿಸಿದ್ದರು. ಈ ವೇಳೆ ಸುಮಲತಾ ಅವರ ಏಜೆಂಟ್ ಮದನ್ ಕುಮಾರ್, ನಿಖಿಲ್ ಕುಮಾರಸ್ವಾಮಿ ನಾಮಪತ್ರದ ಬಗ್ಗೆ ಆಕ್ಷೇಪ ಸಲ್ಲಿದ್ದರು. ಇದನ್ನು ಓದಿ: ಒಂದು ವಿಡಿಯೋ ನೋಡ್ಕೊಳ್ಳಕ್ಕಾಗದವರು ಅನ್ಯಾಯ ಹೇಗೆ ತಡೀತಾರೆ: ಡಿಸಿ ವಿರುದ್ಧ ಸುಮಲತಾ ಕಿಡಿ
Advertisement
Advertisement
ಜಿಲ್ಲಾಧಿಕಾರಿಗಳ ಕಚೇರಿ ನೋಟಿಸ್ ಬೋರ್ಡ್ ಹಾಗೂ ವೆಬ್‍ಸೈಟ್‍ನಲ್ಲಿದ್ದ ನಿಖಿಲ್ ಕುಮಾರಸ್ವಾಮಿ ನಾಮಪತ್ರದಲ್ಲಿ ಕ್ರಮಸಂಖ್ಯೆ 26 ರ ಪ್ರಶ್ನೆಗೆ ಸರಿಯಾಗಿ ಉತ್ತರ ಸಿಕ್ಕಿರಲಿಲ್ಲ. ಈ ವಿಚಾರವನ್ನು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದೆ. ಆದರೆ ಅವರು ಲಿಖಿತ ರೂಪದಲ್ಲಿ ಆಕ್ಷೇಪ ಸಲ್ಲಿಸುವಂತೆ ತಿಳಿಸಿದರು. ಆಗ ಅಧಿಕಾರಿಗಳ ಮುಂದೆಯೇ ಆಕ್ಷೇಪಣಾ ಅರ್ಜಿ ಬರೆದು ಸಲ್ಲಿಸಿದೆ. ಅವರು ಅರ್ಜಿ ಸ್ವೀಕರಿಸಿ ದೃಢೀಕರಣ ಕೂಡ ನೀಡಿದ್ದಾರೆ ಎಂದು ಮದನ್ ಕುಮಾರ್ ತಿಳಿಸಿದ್ದಾರೆ.
Advertisement
ಅರ್ಜಿ ಸಲ್ಲಿಸಿ ಉತ್ತರಕ್ಕಾಗಿ ಕಾಯುತ್ತಿದ್ದೆ. ಸಂಜೆಯವರೆಗೂ ನನಗೆ ಉತ್ತರ ಸಿಗದಿದ್ದರಿಂದ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಕೆ ಹೋಗಿ ಮಾಹಿತಿ ಕೇಳಿದೆ. ಆಗ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕರಿಸಿದ್ದೇವೆ ಎಂದು ತಿಳಿಸಿದರು. ಇದಾದ ನಂತರ ನೀವು ಯಾವುದೇ ಆಕ್ಷೇಪಣೆ ಪತ್ರ ನೀಡಿಲ್ಲವೆಂದು ರಾತ್ರಿ 10 ಗಂಟೆಗೆ ಹಿಂಬರಹ ನೀಡಿದ್ದಾರೆ ಎಂದು ಮದನ್ ಕುಮಾರ್ ಆರೋಪಿಸಿದ್ದಾರೆ.
Advertisement
ಆಕ್ಷೇಪಣಾ ಅರ್ಜಿಯಲ್ಲಿ ಏನಿತ್ತು?:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸಲ್ಲಿಸಿದ ಫಾರ್ಮ್ ನಂಬರ್ 26ನಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚರಾಸ್ತಿ ಹಾಗೂ ಸ್ಥಿರಾಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ನೀವು ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದೇನೆ ಎಂದು ಮದನ್ ಕುಮಾರ್ ತಿಳಿಸಿದ್ದಾರೆ.
ಆಕ್ಷೇಪಣಾ ಅರ್ಜಿ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಇದರಿಂದಾಗಿ ನಾಮಪತ್ರ ಪರಿಶೀಲನೆಯ ದೃಶ್ಯವನ್ನು ಸೆರೆ ಹಿಡಿದ ದೃಶ್ಯವನ್ನು ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ, ವಿಡಿಯೋ ಕ್ಯಾಮೆರಾಮನ್ ಯಾವುದೋ ಮದುವೆ ಕಾರ್ಯಕ್ಕೆ ಕಳಿಸಿದ್ದೇವೆ. ಹೀಗಾಗಿ ವಿಡಿಯೋ ಫುಟೇಜ್ ನೀಡಲು ಎರಡ್ಮೂರು ದಿನ ಸಮಯ ಬೇಕಾಗುತ್ತದೆ ಅಂತ ಹೇಳಿದ್ದರು. ಆದರೆ ಮರುದಿನವೇ ನಮಗೆ ಅರ್ಧ ವಿಡಿಯೋ ಮಾತ್ರ ಕೊಟ್ಟರು. ಅದರಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ ದೃಶ್ಯವನ್ನೇ ಕತ್ತರಿಸಲಾಗಿತ್ತು. ಇದರಿಂದಾಗಿ ಸಂಪೂರ್ಣ ವಿಡಿಯೋ ನೀಡುವಂತೆ ಕೇಳಿದಾಗ, ವಿಡಿಯೋಗ್ರಾಫರ್ ಟ್ಯಾಂಪರ್ ಮಾಡಿದ್ದಾನೆ ಎಂಬ ಸಂಶಯ ಬರುತ್ತಿದೆ. ಈ ಸಂಬಂಧ ಆತನ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಆದರೆ ವಿಡಿಯೋಗ್ರಾಫರ್ ವಿರುದ್ಧ ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ ಎಂದು ಮದನ್ ಕುಮಾರ್ ದೂರಿದರು.