ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಸೋತು ಮಾನಸಿಕವಾಗಿ ಕುಗ್ಗುತ್ತಾರೆ. ಇದಂತು ಸತ್ಯ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜು ನಾಮಪತ್ರ ಸಲ್ಲಿಕೆ ವೇಳೆ ಶಾಸಕರು, ಈ ಬಾರಿಯ ಲೋಕಸಭಾ ಚುನಾವಣೆ ಎಚ್.ಡಿ.ದೇವೇಗೌಡ ಅವರಿಗೆ ಅವಶ್ಯಕವಿರಲಿಲ್ಲ. ಅನವಶ್ಯಕವಾಗಿ ಸ್ಪರ್ಧಿಸಿ ಯಾಕೆ ಗೊಂದಲ ಸೃಷ್ಟಿ ಮಾಡಿಕೊಂಡರು ಅಂತ ಗೊತ್ತಾಗುತ್ತಿಲ್ಲ. ಒಂದೇ ಕುಟುಂಬದವರು ಇಷ್ಟೊಂದು ಜನ ರಾಜಕೀಯಕ್ಕೆ ಬಂದಿರುವುದನ್ನು ನಾನು ಪ್ರಪಂಚದಲ್ಲಿಯೇ ನೋಡಿಲ್ಲ ಎಂದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಲೇವಡಿ ಮಾಡಿದರು.
ಯಾವ ಅಸ್ತ್ರ ಹೋಗಿ ದೇವೇಗೌಡರ ತಲೆ ತಿಂದಿತು ಅಂತ ಗೊತ್ತಿಲ್ಲ. ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ಮಾನಸಿಕವಾಗಿ ನೋವನ್ನ ಅನುಭವಿಸುತ್ತಾರೆ ಎಂದ ಅವರು, ರಾಜ್ಯದ ನಾಲ್ಕೈದು ಬೃಹತ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಈ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ತಿಳಿಯಲಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಕಾರ್ಯಕರ್ತರು ಒಂದಾಗಿದ್ದಾರೆ. ಇದು ಸಂತೋಷದ ವಿಚಾರ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ದೇಶ ಮೊದಲು, ನಂತರ ಬೇರೆ ಎಲ್ಲಾ ಎನ್ನುವ ಸಂದೇಶ ಇದಾಗಿದೆ. ಹಣದ ಹೊಳೆ ಹರಿಸಿ ಗೆಲ್ಲಲು ಯೋಚಿಸಿದರೆ ಅದು ಸಾಧ್ಯವಾಗಲ್ಲ. ಮತದಾರರು ಜಾಗೃತರಾಗಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಕ್ಷೇತ್ರದಿಂದ ಬಿಜೆಪಿ ಗೆಲುವು ಖಚಿತ. ಮತದಾರರು ಏಪ್ರಿಲ್ 18ರಂದು ಅಪವಿತ್ರ ಮೈತ್ರಿ ವ್ಯವಸ್ಥೆಗೆ ಉತ್ತರ ನೀಡಿ, ದೋಸ್ತಿ ಸರ್ಕಾರವನ್ನು ತಿರಸ್ಕಾರ ಮಾಡಲಿದ್ದಾರೆ. ರಾಜ್ಯದಲ್ಲಿ 20-22 ಸ್ಥಾನ ಗೆಲ್ಲುತ್ತೇವೆ ಎನ್ನುವ ಭರವಸೆಯಿದೆ ಎಂದರು.