ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸುಮಲತಾ ಅವರು ಪತಿ ಅಂಬರೀಶ್ ಅವರ ಆಶೀರ್ವಾದ ಪಡೆದಿದ್ದಾರೆ.
ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ ಅವರು ನಮನ ಸಲ್ಲಿಸಿದರು. ಈ ವೇಳೆ ಅಂಬಿ ಸಮಾಧಿಗೆ ಹೂವಿನ ಮಾಲೆ ಹಾಕಿ, ಅಂಬರೀಶ್ ಅವರ ಫೋಟೋ ಮುಂದೆ ನಾಮಪತ್ರದ ದಾಖಲೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪತಿಯನ್ನು ನೆನೆದು ಕಣ್ಣೀರು ಹಾಕಿದರು.
Advertisement
Advertisement
ಸುಮಲತಾ ಅವರಿಗೆ ಪುತ್ರ ಅಭಿಷೇಕ್, ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸಾಥ್ ನೀಡಿದರು. ಪೂಜೆ ಮುಗಿಸಿ ಸಮಾಧಿಯಿಂದ ಹೊರ ಬರುತ್ತಿದ್ದಂತೆ ಅಭಿಷೇಕ್ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿ ಬಿದ್ದರು. ಬಳಿಕ ಸಾರ್ವಜನಿಕರು ಅಂಬಿ ಪರ ಘೋಷಣೆ ಕೂಗಿದರು.
Advertisement
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಮಲತಾ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆಗೆ ನಾಳೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೆ ಮೆರವಣಿಗೆ ಹೋಗುತ್ತದೆ. ಜನರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ನಾಮಪತ್ರ ಸಲ್ಲಿಸುವ ನಿರ್ಧಾರ ಕೈಗೊಂಡಿರುವೆ. ಈ ವೇಳೆ ನಟರಾದ ದರ್ಶನ್, ಯಶ್ ಸೇರಿದಂತೆ ಹಲವು ಸಿನಿಮಾ ಹಿರಿಯ ನಟರು ಬರುತ್ತಾರೆ ಎಂದರು.
Advertisement
ನಟ ಕಿಚ್ಚ ಸುದೀಪ್ ನಮಗೆ ತುಂಬಾನೇ ಆತ್ಮೀಯ. ಅವರು ಕೂಡ ಬೆಂಬಲ ಸೂಚಿಸುತ್ತಾರೆ. ಸುದೀಪ್ ಹಾಗೂ ನಮ್ಮ ನಡುವೆ ಇರುವ ಸ್ನೇಹವನ್ನು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು, ನಾಮಪತ್ರ ಸಲ್ಲಿಕೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ನನ್ನ ಭೇಟಿಯಾಗುವ ಬಗ್ಗೆ ನಾನು ಯಾವುದೇ ದಿನಾಂಕ ಫಿಕ್ಸ್ ಮಾಡಿರಲಿಲ್ಲ ಎಂದು ಹೇಳಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಹೀಗಾಗಿ ಮೈಸೂರಿಗೆ ಇಂದು ರಾತ್ರಿಯೇ ಪ್ರಯಾಣ ಬೆಳೆಸುತ್ತೇವೆ. ಬೆಳಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸುತ್ತೇವೆ. ಅಲ್ಲಿಂದ ಮಂಡ್ಯಕ್ಕೆ ಹೋಗಿ ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.