ವಯನಾಡಿನಲ್ಲಿ ರಾಹುಲ್ ನಾಮಪತ್ರ ಸಲ್ಲಿಕೆ – ಪ್ರಿಯಾಂಕ ಸಾಥ್

Public TV
2 Min Read
Rahul Gandhi Nomination

ತಿರುವನಂತಪುರಂ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಪ್ರಿಯಾಂಕ ಗಾಂಧಿ ಅವರು ಸಹೋದರನಿಗೆ ಸಾಥ್ ನೀಡಿದರು.

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಅವರು ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ದಾರಿ ಉದ್ದಕ್ಕೂ “ರಾಹುಲ್, ರಾಹುಲ್” ಎಂದು ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ರಾಹುಲ್ ಗಾಂಧಿ ಅವರು ಎಲ್ಲಾ ದಾಖಲೆಗಳನ್ನ ನೀಡಿ ನಾಮಪತ್ರ ಸಲ್ಲಿಸಿದರು.

ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡು ಎರಡೂ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರ ವಿರುದ್ಧ ಸೋಲುವ ಭಯದಿಂದ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಟೀಕೆ ಕೂಡ ಮಾಡಿದ್ದಾರೆ.

ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕೇರಳಕ್ಕೆ ಆಗಮಿಸಿದ್ದರು. ವಯನಾಡು ನಗರದಿಂದ 73 ಕಿ.ಮೀ. ದೂರದಲ್ಲಿರುವ ಕೋಯಿಕ್ಕೋಡ್ ನಲ್ಲಿ ವಾಸ್ತವ್ಯ ಹೂಡಿದ್ದರು. ಕೋಯಿಕ್ಕೋಡ್ ನಿಂದ ಹೆಲಿಕಾಪ್ಟರ್ ಮೂಲಕ ಇಂದು ಬೆಳಗ್ಗೆ 10 ಗಂಟೆಗೆ ವಯನಾಡಿಗೆ ಬಂದಿಳಿದರು. ಅಲ್ಲಿಂದ ಬೃಹತ್ ರ್ಯಾಲಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಕಲ್ಪೆಟ್ಟಾ ಮತ್ತು ವಯನಾಡುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಾವೋವಾದಿಗಳ ಭೀತಿ ಹಿನ್ನೆಲೆ ಬುಧವಾರದಿಂದಲೇ ಮುಂಚೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕ – ಕೇರಳ ಮತ್ತು ಕೇರಳ – ತಮಿಳುನಾಡು ಗಡಿಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಇಲ್ಲಿಂದ ಸ್ಪರ್ಧಿಸುವಂತೆ ಬೇಡಿಕೆ ಇಟ್ಟಿದ್ದೆವು. ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

Share This Article