ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಕಡು ವೈರಿಗಳಂತೆ ವರ್ತಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ಕೊನೆಗೂ ಪರಸ್ಪರ ಭೇಟಿಯಾಗಿದ್ದಾರೆ.
ಚಾಮುಂಡೇಶ್ವರಿ ಚುನಾವಣೆ ಸೋಲಿನ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಬೆಂಗಳೂರು ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಒಟ್ಟಿಗೆ ಭೋಜನ ಸವಿದಿದ್ದಾರೆ. ಬಳಿಕ ಮೈಸೂರಿನಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಉಭಯ ನಾಯಕರ ನಡುವೆ ಸುದೀರ್ಘ ಚರ್ಚೆ ನಡೆದಿದೆ. ಈ ಮೂಲಕ ಪಕ್ಷಕ್ಕಾಗಿ, ಮೈತ್ರಿ ಧರ್ಮ ಪಾಲನೆಗಾಗಿ ಪರಸ್ಪರ ಮುನಿಸು ಮರೆತು ಮಾಜಿ ಸಿಎಂ ಹಾಗೂ ಹಾಲಿ ಸಚಿವರು ಒಂದಾಗಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಜಿ.ಟಿ.ದೇವೇಗೌಡ ಅವರು ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಅವರ ಹೆಸರನ್ನು ಕೂಗಿ, ಜನರಿಂದ ಜೈಕಾರ ಕೂಗಿಸಿದ್ದಾರೆ.